Australia vs South Africa: 6ನೇ ಟಿ20 ವಿಶ್ವಕಪ್ ಟೂರ್ನಿಗೆ ಇಂದು ಅಧಿಕೃತ ಚಾಲನೆ: ಮೊದಲ ಪಂದ್ಯದಲ್ಲಿ ಆಸೀಸ್-ಆಫ್ರಿಕಾ ಕಾದಾಟ

| Updated By: Vinay Bhat

Updated on: Oct 23, 2021 | 7:30 AM

T20 World Cup 2021, Super 12: ಉಭಯ ತಂಡಗಳು ಈವರೆಗೆ ಒಟ್ಟು 22 ಬಾರಿ ಟಿ20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ 13 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ, ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳಲ್ಲಿ ಜಯ ಸಾಧಿಸಿದೆ.

Australia vs South Africa: 6ನೇ ಟಿ20 ವಿಶ್ವಕಪ್ ಟೂರ್ನಿಗೆ ಇಂದು ಅಧಿಕೃತ ಚಾಲನೆ: ಮೊದಲ ಪಂದ್ಯದಲ್ಲಿ ಆಸೀಸ್-ಆಫ್ರಿಕಾ ಕಾದಾಟ
Australia v South Africa T20 World Cup
Follow us on

ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾದುಕುಳಿತಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಆರನೇ ಆವೃತ್ತಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಈಗಾಗಲೇ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, 4 ತಂಡಗಳು ಸೇರಿದಂತೆ ಒಟ್ಟು 12 ತಂಡಗಳ ಮುಖಾಮುಖಿ ಕಾವೇರಿಸಿಕೊಳ್ಳಲಿದೆ. ವಿಶೇಷ ಎಂದರೆ ಇಂದಿನ ಮೊದಲ ಪಂದ್ಯದಲ್ಲೇ ಈ ವರೆಗೆ ಕಪ್‌ ಗೆಲ್ಲದ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ (Australia vs South Africa) ತಂಡಗಳು ಸೆಣೆಸಾಟ ನಡೆಸಲಿವೆ. ಕಾಂಗರೂ ಪಡೆಯನ್ನು ಆ್ಯರೋನ್ ಫಿಂಚ್ (Aaron Finch) ಮುನ್ನಡೆಸಿದರೆ, ಆಫ್ರಿಕಾಕ್ಕೆ ತೆಂಬಾ ಬವುಮಾ (Temba Bavuma) ನಾಯಕನಾಗಿದ್ದಾರೆ.

ಉಭಯ ತಂಡಗಳಿಗೂ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ಮಹತ್ವದ್ದಾಗಿದೆ. ಇವೆರಡೂ ಬಲಿಷ್ಠ ತಂಡಗಳಾದರೂ ಕೂಟದ ನೆಚ್ಚಿನ ತಂಡಗಳಂತೂ ಅಲ್ಲ. 2010ರಲ್ಲಿ ಫೈನಲ್‌ ಪ್ರವೇಶಿಸಿದ್ದಷ್ಟೇ ಆಸ್ಟ್ರೇಲಿಯದ ಅತ್ಯುತ್ತಮ ಸಾಧನೆ. ಇನ್ನೊಂದೆಡೆ, ಹರಿಣಗಳ ಪಡೆಗೆ ಫೈನಲ್‌ ಕೂಡ ಮರೀಚಿಕೆಯಾಗಿದೆ. ಹೀಗಾಗಿ ಈ ಬಾರಿ ಆಸೀಸ್-ಆಫ್ರಿಕಾ ಪ್ರದರ್ಶನ ಯಾವರೀತಿ ಇರಬಹುದು ಎಂಬುದು ಕಾದುನೋಡಬೇಕಿದೆ.

ಮೊದಲ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ತೊಂದರೆಗಳಿವೆ. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಫಾರ್ಮ್‌ನಲ್ಲಿ ಇಲ್ಲದೇ ಇರುವುದು ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ಇವರು 0 ಮತ್ತು 1 ರನ್ ಮಾತ್ರ. ಇದರ ನಡುವೆ ನಾಯಕ ಆ್ಯರೋನ್ ಫಿಂಚ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಕಳೆದು ಬಂದಿದ್ದು, ಕಣಕ್ಕಿಳಿಯುತ್ತಾರ ಎಂಬುದು ನೋಡಬೇಕಿದೆ.

ಉಪನಾಯಕ ಪ್ಯಾಟ್ ಕಮಿನ್ಸ್‌ ಐಪಿಎಲ್‌ನ ಮೊದಲ ಹಂತದ ಪಂದ್ಯದ ನಂತರ ಆಡಲಿಲ್ಲ. ಸ್ಟೀವ್ ಸ್ಮಿತ್‌, ಮಾರ್ಕಸ್ ಸ್ಟೋಯಿನಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್‌ ಮೇಲೆ ತಂಡ ನಿರೀಕ್ಷೆ ಇರಿಸಿಕೊಂಡಿದೆ. ಇವರೇ ಪಂದ್ಯವನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಹೊರಬೇಕಿದೆ.

ಇತ್ತ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲು ದಕ್ಷಿಣ ಆಫ್ರಿಕಾ ಅಂದಿನಿಂದಲೂ ಎಡವುತ್ತಿದೆ. ಆದರೆ, ಆಸ್ಟ್ರೇಲಿಯಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠ ಎಂಬುದು ಗೋಚರಿಸುತ್ತದೆ. ತಾಂತ್ರಿಕವಾಗಿಯೂ ಮೇಲುಗೈ ಹೊಂದಿದೆ. ವಿಂಡೀಸ್‌, ಐರ್ಲೆಂಡ್‌ ಮತ್ತು ಲಂಕಾ ವಿರುದ್ಧ ಸರಣಿ ಗೆದ್ದ ಬಳಿಕ ಎರಡೂ ಅಭ್ಯಾಸ ಪಂದ್ಯಗಳನ್ನೂ ಗೆದ್ದು ಬೀಗಿದೆ.

ಕ್ವಿಂಟನ್ ಡಿಕಾಕ್‌, ಬವುಮ, ಮಾರ್ಕ್‌ರಮ್‌, ಹೆಂಡ್ರಿಕ್ಸ್‌ ಅವರನ್ನೊಳಗೊಂದ ಅಗ್ರ ಕ್ರಮಾಂಕ ಹೆಚ್ಚು ಬಲಿಷ್ಠ. ಪವರ್‌ ಹಿಟ್ಟರ್‌ ಮಿಲ್ಲರ್‌ ಫಾರ್ಮ್ ಬಗ್ಗೆ ಅನುಮಾನವಿದೆ. ಮಧ್ಯಮ ಕ್ರಮಾಂಕ ಸಾಮಾನ್ಯ. ಬೆಸ್ಟ್‌ ಫಿನಿಶರ್ ಕೊರತೆ ಇದೆ. ಬೌಲಿಂಗ್​ನಲ್ಲಿ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಆನ್ರಿಚ್ ನೋರ್ಜೆ, ಮಹಾರಾಜ್‌ ಪ್ರಮುಖ ಅಸ್ತ್ರವಾಗಿದ್ದಾರೆ. ಆಲ್‌ರೌಂಡ್‌ ಪಾತ್ರ ನಿಭಾಯಿಸಲು ಪ್ರಿಟೋರಿಯಸ್‌ ಮತ್ತು ಮುಲ್ಡರ್‌ ಇದ್ದಾರೆ.

ಉಭಯ ತಂಡಗಳು ಈವರೆಗೆ ಒಟ್ಟು 22 ಬಾರಿ ಟಿ20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ 13 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ, ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ 3:30ಕ್ಕೆ, ಅಬುಧಾಬಿಯ ಶೇಕ್ ಝಯೇದ್ ಸ್ಟೇಡಿಯಂ.

T20 World Cup: 44 ರನ್​ಗಳಿಗೆ ನೆದರ್‌ಲ್ಯಾಂಡ್ಸ್‌ ಸರ್ವಪತನ! ಎಂಟನೇ ಓವರ್‌ನಲ್ಲಿ ಗೆದ್ದು ಸೂಪರ್ -12 ಗೆ ಪ್ರವೇಶಿಸಿದ ಲಂಕಾ ಪಡೆ

(T20 World Cup The first match is between Australia against South Africa at the Sheikh Zayed Stadium in Abu Dhabi)