T20 World Cup: ಇಂದು ಎರಡು ಪಂದ್ಯ: ಮಾಡು ಇಲ್ಲವೇ ಕಾದಾಟದಲ್ಲಿ ವಿಂಡೀಸ್-ಬಾಂಗ್ಲಾ; ಪಾಕ್​ಗೆ ಸೋಲುಣಿಸುತ್ತಾ ಅಫ್ಘಾನ್

| Updated By: Vinay Bhat

Updated on: Oct 29, 2021 | 8:44 AM

T20 World Cup WI vs BAN: ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ವೆಸ್ಟ್‌ ಇಂಡೀಸ್‌ ಮತ್ತು ಬಾಂಗ್ಲಾದೇಶ ತಂಡಗಳಲ್ಲಿ ಒಂದು ತಂಡ ಗೆಲುವಿನ ಹಳಿ ಏರಲಿದ್ದು, ಹ್ಯಾಟ್ರಿಕ್‌ ಸೋಲನುಭವಿಸುವ ತಂಡ ನಿರ್ಗಮನ ಬಾಗಿಲಲ್ಲಿ ನಿಲ್ಲುವುದು ಖಚಿತ.

T20 World Cup: ಇಂದು ಎರಡು ಪಂದ್ಯ: ಮಾಡು ಇಲ್ಲವೇ ಕಾದಾಟದಲ್ಲಿ ವಿಂಡೀಸ್-ಬಾಂಗ್ಲಾ; ಪಾಕ್​ಗೆ ಸೋಲುಣಿಸುತ್ತಾ ಅಫ್ಘಾನ್
T20 World Cup WI vs BAN
Follow us on

ಟಿ20 ವಿಶ್ವಕಪ್​ನಲ್ಲಿಂದು (T20 World Cup) ಎರಡು ಪಂದ್ಯಗಳು ನಡೆಯಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಮೊದಲ ಪಂದ್ಯದಲ್ಲಿ ಕೀರೊನ್ ಪೊಲಾರ್ಡ್ (Kieron Pollard) ನಾಯಕತ್ವದ ವೆಸ್ಟ್​ ಇಂಡೀಸ್ ಮತ್ತು ಮೊಹಮ್ಮದುಲ್ಲ ನೇತೃತ್ವದ ಬಾಂಗ್ಲಾದೇಶ (West Indies vs Bangladesh) ತಂಡ ಮುಖಾಮುಖಿ ಆಗುತ್ತಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ (Pakistan vs Afghanistan) ತಂಡಗಳು ಸೆಣೆಸಾಟ ನಡೆಸಲಿವೆ. ಎರಡು ಕೂಡ ಹೈವೋಲ್ಟೇಜ್ ಪಂದ್ಯಗಳಾಗಲಿವೆ.

ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ವೆಸ್ಟ್‌ ಇಂಡೀಸ್‌ ಮತ್ತು ಬಾಂಗ್ಲಾದೇಶ ತಂಡಗಳಲ್ಲಿ ಒಂದು ತಂಡ ಗೆಲುವಿನ ಹಳಿ ಏರಲಿದ್ದು, ಹ್ಯಾಟ್ರಿಕ್‌ ಸೋಲನುಭವಿಸುವ ತಂಡ ನಿರ್ಗಮನ ಬಾಗಿಲಲ್ಲಿ ನಿಲ್ಲುವುದು ಖಚಿತ. ಉಭಯ ತಂಡಗಳೂ ಬಲಿಷ್ಠವಾಗಿವೆ. ಟಿ20 ತಜ್ಞ ಆಟಗಾರರನ್ನೇ ಹೊಂದಿವೆ. ಆದರೆ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲವಾಗಿವೆ. ಅದರಲ್ಲೂ ತೀರಾ ಅಪಾಯಕಾರಿ ಎಂದೇ ಭಾವಿಸಲಾಗಿದ್ದ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡವಂತೂ ತೀರಾ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ವೆಸ್ಟ್​ ಇಂಡೀಸ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 55 ರನ್‌ಗಳಿಗೆ ಆಲೌಟಾಗಿದ್ದ ತಂಡ ಎರಡನೇ ಪಂದ್ಯದಲ್ಲಿ ನೂರರ ಗಡಿ ದಾಟಿತ್ತಾದರೂ ಎವಿನ್ ಲೂಯಿಸ್‌ ಅವರನ್ನು ಹೊರತುಪಡಿಸಿದರೆ ತಂಡದ ಇತರ ಬ್ಯಾಟರ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ. ಇಂದಿನ ಪಂದ್ಯದಲ್ಲಿ ಸಿಮನ್ಸ್ ಬದಲಿಗೆ ರಾಸ್ಟನ್ ಚೇಸ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ತಂಡದ ಬೌಲರ್‌ಗಳು ಕೂಡ ಪರಿಣಾಮ ಬೀರುತ್ತಿಲ್ಲ. ಎಡಗೈ ಸ್ಪಿನ್ನರ್ ಅಕೀಲ್ ಹೊಸೇನ್ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಇತ್ತೀಚಿನ ಏಳು ಪಂದ್ಯಗಳ ಪೈಕಿ ಒಂದರಲ್ಲೂ ಜಯ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಬಾಂಗ್ಲಾದೇಶ ಕೂಡ ಸಂಕಷ್ಟದಲ್ಲಿದೆ. ಉಪಖಂಡದ ಪಿಚ್‌ನಲ್ಲಿ ಆ ತಂಡ ಪ್ರಭಾವ ಬೀರಬೇಕಾಗಿತ್ತು. ಆದರೆ ತೀವ್ರ ಪೈಪೋಟಿ ಒಡ್ಡಿದರೂ ಜಯ ಮರೀಚಿಕೆ ಆಗುತ್ತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂಥ ಬಲಿಷ್ಠ ತಂಡಗಳನ ವಿರುದ್ಧ ಜಯ ಗಳಿಸಿ ಟೂರ್ನಿಗೆ ಬಂದಿದ್ದ ತಂಡ ಇಲ್ಲಿ ಪರಿಣಾಮ ಬೀರಲು ವಿಫಲವಾಗಿದೆ. ಮೊಹಮ್ಮದ್ ನಯೀಮ್‌, ಲಿಟನ್ ದಾಸ್‌, ಶಕೀಬ್ ಅಲ್ ಹಸನ್‌, ಮೊಹಮ್ಮದುಲ್ಲ, ಮುಷ್ಫಿಕುರ್ ರಹೀಂ ಮುಂತಾದವರು ಪ್ರತಿಭಾವಂತ ಬ್ಯಾಟರ್‌ಗಳು. ಆದರೆ ಅವರ ಬ್ಯಾಟ್‌ನಿಂದ ನಿರೀಕ್ಷಿತ ಮಟ್ಟದಲ್ಲಿ ರನ್‌ಗಳು ಬರುತ್ತಿಲ್ಲ.

ಇನ್ನೂ ಸತತ ಗೆಲುವಿನೊಂದಿಗೆ ಸೆಮಿ ಫೈನಲ್ ಹಂತಕ್ಕೇರುವ ಸನಿಹದಲ್ಲಿರುವ ಪಾಕಿಸ್ತಾನಕ್ಕೆ ಅಫ್ಘಾನ್ ಶಾಕ್ ನೀಡುತ್ತಾ ಎಂಬುದು ಮತ್ತೊಂದು ಕುತೂಹಲ. ಉತ್ತಮ ಬೌಲಿಂಗ್ ಪಡೆ ಇರುವ ಅಫ್ಘಾನಿಸ್ತಾನ ತಂಡವು ಪಾಕ್‌ ಬ್ಯಾಟಿಂಗ್‌ಗೆ ಕಠಿಣ ಸವಾಲೊಡ್ಡಲಿದೆ. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಗೆಲುವಿನಲ್ಲಿ ನಜೀಬ್ ಉರ್ ರೆಹಮಾನ್ (5 ವಿಕೆಟ್) ಮತ್ತು ಸ್ಪಿನ್ನರ್ ರಶೀದ್ ಖಾನ್ (4 ವಿಕೆಟ್) ಅವರು ಮಿಂಚಿದ್ದರು.

ಆದರೆ ಭಾರತ ಮತ್ತು ನ್ಯೂಜಿಲೆಂಡ್‌ನಂತಹ ಬಲಶಾಲಿ ತಂಡಗಳನ್ನೇ ಮಣಿಸಿರುವ ಪಾಕ್​ಗೆ ನಾಯಕ ಬಾಬರ್ ಅಜಾಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರು ಉತ್ತಮ ಆರಂಭ ನೀಡುತ್ತಿದ್ದಾರೆ. ಶೋಯಬ್ ಮಲಿಕ್, ಮೊಹಮ್ಮದ್ ಹಫೀಜ್ , ಇಮಾದ್ ವಸೀಂ, ಜಮಾನ್ ಅವರು ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಒದಗಿಸುವ ಸಮರ್ಥರಾಗಿದ್ದಾರೆ. ಶಾಯಿನ್ ಶಾ ಆಫ್ರಿದಿ, ಹ್ಯಾರಿಸ್ ರವೂಫ್ ಅವರು ಉತ್ತಮ ಲಯದಲ್ಲಿರುವುದು ನಾಯಕ ಬಾಬರ್‌ ವಿಶ್ವಾಸ ಹೆಚ್ಚಲು ಕಾರಣವಾಗಿದೆ.

ವೆಸ್ಟ್​ ಇಂಡೀಸ್ vs ಬಾಂಗ್ಲಾದೇಶ ಪಂದ್ಯ ಆರಂಭ: ಮಧ್ಯಾಹ್ನ 3:30ಕ್ಕೆ

ಪಾಕಿಸ್ತಾನ vs ಅಫ್ಘಾನಿಸ್ತಾನ ಪಂದ್ಯ ಆರಂಭ: ಸಂಜೆ 7:30ಕ್ಕೆ

David Warner: ಫಾರ್ಮ್​ಗೆ ಬಂದ ಡೇವಿಡ್ ವಾರ್ನರ್: ಅಗ್ರಸ್ಥಾನದತ್ತ ಆಸ್ಟ್ರೇಲಿಯಾ ಕಣ್ಣು: 5ನೇ ಸ್ಥಾನದಲ್ಲಿ ಭಾರತ

(T20 World Cup WI vs BAN A Must-win Situation After West Indies And Bangladesh Suffer Back-to-back Defeats)