IND vs PAK: ಶೇಕ್​ಹ್ಯಾಂಡ್ ಮಾಡುವಂತೆ ಸೂಚಿಸಿದ ಗಂಭೀರ್: ವಿಡಿಯೋ ವೈರಲ್

Asia Cup 2025 IND vs PAK: ಏಷ್ಯಾಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿತ್ತು. ದುಬೈನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್​ಗಳು ಮಾತ್ರ. ಈ ಗುರಿಯನ್ನು ಟೀಮ್ ಇಂಡಿಯಾ 15.5 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಇದೀಗ ದ್ವಿತೀಯ ಪಂದ್ಯದಲ್ಲೂ ಭಾರತ ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

IND vs PAK: ಶೇಕ್​ಹ್ಯಾಂಡ್ ಮಾಡುವಂತೆ ಸೂಚಿಸಿದ ಗಂಭೀರ್: ವಿಡಿಯೋ ವೈರಲ್
Gautam Gambhir

Updated on: Sep 22, 2025 | 11:38 AM

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಶೇಕ್​ಹ್ಯಾಂಡ್ ವಿವಾದ ಮುಂದುವರೆದಿದೆ. ಸೆಪ್ಟೆಂಬರ್ 14 ರಂದು ನಡೆದ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಭಾರತೀಯ ಆಟಗಾರರ ಈ ನಡೆಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಟೂರ್ನಿಯಿಂದ ಹಿಂದೆ ಸರಿಯುವ ಗೊಡ್ಡು ಬೆದರಿಕೆಯೊಡ್ಡಿದ್ದರು.

ಇದಾಗ್ಯೂ ಟೀಮ್ ಇಂಡಿಯಾ ಆಟಗಾರರು ತಮ್ಮ ನಿಲುವು ಬದಲಿಸಿಲ್ಲ. ಸೆಪ್ಟೆಂಬರ್ 21 ರಂದು ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಪಂದ್ಯದ ವೇಳೆಯೂ ಭಾರತೀಯ ಆಟಗಾರರು ಶೇಕ್​ಹ್ಯಾಂಡ್ ನೀಡಿಲ್ಲ. ಪಂದ್ಯ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ್ದಾರೆ.

ಆದರೆ ಈ ಬಾರಿ ಡ್ರೆಸ್ಸಿಂಗ್ ರೂಮ್​ಗೆ ತೆರಳಿದ ಟೀಮ್ ಇಂಡಿಯಾ ಆಟಗಾರರನ್ನು ಕೋಚ್ ಗೌತಮ್ ಗಂಭೀರ್ ವಾಪಾಸ್ ಕರೆದಿದ್ದಾರೆ. ಪಾಕ್ ಆಟಗಾರರನ್ನು ನಿರ್ಲಕ್ಷಿಸಿ ತೆರಳಿದ್ದ ಭಾರತೀಯ ಆಟಗಾರರು ಅಂಪೈರ್​ಗಳಿಗೆ ಹಸ್ತಲಾಘವ ನೀಡುವುದನ್ನು ಮರೆತಿದ್ದರು.

ಈ ಶಿಷ್ಟಾಚಾರವನ್ನು ಪಾಲಿಸುವಂತೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ಆಟಗಾರರಿಗೆ ಸೂಚಿಸಿದ್ದಾರೆ. ಅದರಂತೆ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಮ್​ನಿಂದ ಹಿಂತಿರುಗಿ ಅಂಪೈರ್​ಗಳ ಜೊತೆ ಕೈ ಕುಲುಕಿದ್ದಾರೆ. ಇದೀಗ ಡ್ರೆಸ್ಸಿಂಗ್ ರೂಮ್​ನಿಂದ ಹೊರ ಬಂದು  ಅಂಪೈರ್‌ಗಳ ಕೈಕುಲುಕುವಂತೆ ಕೇಳಿಕೊಳ್ಳುತ್ತಿರುವ ಗೌತಮ್ ಗಂಭೀರ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಸ್ತಲಾಘವ ನೀಡುವಂತೆ ಸೂಚಿಸಿದ ಗೌತಮ್ ಗಂಭೀರ್ ವಿಡಿಯೋ:

ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ:

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್​ ಕಲೆಹಾಕಿದ್ದರು.

172 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 105 ರನ್​ಗಳ ಜೊತೆಯಾಟವಾಡಿದ ಬಳಿಕ ಶುಭ್​ಮನ್ ಗಿಲ್ (47) ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 74 ರನ್ ಚಚ್ಚಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 18.5 ಓವರ್​ಗಳಲ್ಲಿ 174 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ: Asia Cup 2025: ಫೈನಲ್​ಗೇರಲು ಟೀಮ್ ಇಂಡಿಯಾ ಎಷ್ಟು ಪಂದ್ಯ ಗೆಲ್ಲಬೇಕು?

ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್: ಸಾಹಿಬ್ಝಾದ ಫರ್ಹಾನ್, ಸೈಮ್ ಅಯೂಬ್, ಫಖರ್ ಝಮಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಝ್, ಹುಸೈನ್ ತಲಾತ್, ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಹಾರಿಸ್ ರೌಫ್.

Published On - 11:37 am, Mon, 22 September 25