IND vs SL: ರಾಹುಲ್, ಜಡೇಜಾ ಬಿಟ್ಟರೆ ಉಳಿದವರು ಕೊಲಂಬೊದಲ್ಲಿ ಆಡಿಲ್ಲ..!
India Sri Lanka 2nd Test: ಭಾರತ vs ಶ್ರೀಲಂಕಾ 2ನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯಲಿದೆ. ಗಾಲೆಯಲ್ಲಿ ಗೆದ್ದಿದ್ದರೂ, ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸರಣಿ ಗೆಲ್ಲುವುದು ಟೀಂ ಇಂಡಿಯಾಕ್ಕೆ ಸುಲಭವಲ್ಲ. ಪ್ರಸ್ತುತ ತಂಡದ ಹೆಚ್ಚಿನ ಆಟಗಾರರಿಗೆ ಇಲ್ಲಿ ಆಡಿದ ಅನುಭವವಿಲ್ಲ. ಭಾರತ ಇಲ್ಲಿ ಒಟ್ಟು 9 ಟೆಸ್ಟ್ ಆಡಿದ್ದು, 3 ಮಾತ್ರ ಗೆದ್ದಿದೆ. ಕೆಎಲ್ ರಾಹುಲ್, ಜಡೇಜಾ ಹಿಂದಿನ ಅನುಭವ ತಂಡಕ್ಕೆ ನೆರವಾಗಬಹುದು.

ಭಾರತ ಮತ್ತು ಶ್ರೀಲಂಕಾ (India vs Sri Lanka ) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಮತ್ತು ನಿರ್ಣಾಯಕ ಪಂದ್ಯ ಆಗಸ್ಟ್ 23 ರಿಂದ ಕೊಲಂಬೊದಲ್ಲಿ (Colombo Test) ನಡೆಯಲಿದೆ. ಈ ಪಂದ್ಯ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳಲು ನೋಡುತ್ತಿದೆ. ಆದರೆ ಕೊಲಂಬೊದಲ್ಲಿ ಗೆಲ್ಲುವುದು ಕೂಡ ಟೀಂ ಇಂಡಿಯಾಕ್ಕೆ ಅಷ್ಟು ಸುಲಭವಾಗಿಲ್ಲ. ಏಕೆಂದರೆ ಗಾಲೆಯಂತೆ ಕೊಲಂಬೊದಲ್ಲಿಯೂ ಟೀಂ ಇಂಡಿಯಾ ಆಟಗಾರರಿಗೆ ಆಡಿದ ಅನುಭವವಿಲ್ಲ.
ರಾಹುಲ್, ಜಡೇಜಾ ಮಾತ್ರ ಆಡಿದ್ದಾರೆ
ವಾಸ್ತವವಾಗಿ ಭಾರತ ತಂಡವು ತನ್ನ 10 ನೇ ಟೆಸ್ಟ್ ಪಂದ್ಯವನ್ನು ಕೊಲ ಮೈದಾನದಲ್ಲಿ ಆಡಲಿದೆ. ಪ್ರಸ್ತುತ ಭಾರತೀಯ ತಂಡದಲ್ಲಿರುವ 15 ಆಟಗಾರರಲ್ಲಿ 13 ಆಟಗಾರರು ಮೊದಲ ಬಾರಿಗೆ ಕೊಲಂಬೊದಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಅಂದರೆ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರಾಗಿ ಕೊಲಂಬೊದಲ್ಲಿ ಆಡಿದ ಅನುಭವವಿಲ್ಲ. ಪ್ರಸ್ತುತ ತಂಡದಲ್ಲಿರುವ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಮಾತ್ರ ಈ ಮೈದಾನದಲ್ಲಿ ಈ ಹಿಂದೆ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
9 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ
1948 ರಿಂದ 2017 ರವರೆಗೆ ಭಾರತ ತಂಡವು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ, ಟೀಂ ಇಂಡಿಯಾ ಈ ಮೈದಾನದಲ್ಲಿ ಕೇವಲ ಮೂರು ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳನ್ನು ಸೋತಿದೆ. ಉಳಿದಂತೆ ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಭಾರತ ತಂಡ ಇಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿದ್ದು 2017 ರಲ್ಲಿ. ಅಂದಿನಿಂದ ಈ ಮೈದಾನದಲ್ಲಿ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಆಡಿಲ್ಲ.
ಅನುಭವಿಗಳ ಪ್ರದರ್ಶನ ಹೇಗಿದೆ?
ಕೊಲಂಕೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತ ತಂಡವು ಈ ಹಿಂದೆ ಗೆದ್ದ ಎರಡೂ ಗೆಲುವುಗಳಲ್ಲಿ ಕೆ.ಎಲ್. ರಾಹುಲ್ ಭಾಗವಾಗಿದ್ದರು. ಅವರು ಇಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಮೂರು ಇನ್ನಿಂಗ್ಸ್‌ಗಳಲ್ಲಿ 61 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಅವರ ಗರಿಷ್ಠ ಸ್ಕೋರ್ 57 ರನ್. ರವೀಂದ್ರ ಜಡೇಜಾ ಇಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದು, ಒಂದು ಇನ್ನಿಂಗ್ಸ್‌ನಲ್ಲಿ 70 ರನ್ ಬಾರಿಸಿದ್ದಾರೆ. ಇದಲ್ಲದೆ, ಜಡೇಜಾ ಈ ಮೈದಾನದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IND vs SL: ಭಾರತ- ಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ನಡೆಯಲಿದೆ?
ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸರನ್ಶ್ ಜೈನ್, ಆಕಿಬ್ ನಬಿ, ಸರ್ಫರಾಜ್ ಖಾನ್.




