ನಾನು ಹೋಗಿ ಹುಕ್ಕಾ ಇಡುತ್ತಿರಲಿಲ್ಲ: ಧೋನಿ ವಿರುದ್ಧ ಪಠಾಣ್ ಗಂಭೀರ ಆರೋಪ

ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಇರ್ಫಾನ್ ಪಠಾಣ್ 29 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ 2007ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಇರ್ಫಾನ್ ಪಠಾಣ್ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಭಾರತ ಟಿ20 ತಂಡದಲ್ಲಿ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ.

ನಾನು ಹೋಗಿ ಹುಕ್ಕಾ ಇಡುತ್ತಿರಲಿಲ್ಲ: ಧೋನಿ ವಿರುದ್ಧ ಪಠಾಣ್ ಗಂಭೀರ ಆರೋಪ
Ms Dhoni - Irfan Pathan

Updated on: Sep 02, 2025 | 2:13 PM

ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅದು ಕೂಡ ಆಟಗಾರರ ಆಯ್ಕೆ ವಿಷಯದಲ್ಲಿ ಧೋನಿ ಪಕ್ಷಪಾತ ಮಾಡುತ್ತಿದ್ದರು ಎಂಬ ಆರೋಪದೊಂದಿಗೆ…!

ಹೌದು, ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇರ್ಫಾನ್ ಪಠಾಣ್ ತಮ್ಮ ಟೀಮ್ ಇಂಡಿಯಾದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ತಾನು ಹೇಗೆ ಅವಕಾಶ ವಂಚಿತನಾದೆ ಎಂಬುದನ್ನು ಸಹ ಪ್ರಸ್ತಾಪಿಸಿದ್ದಾರೆ.

2008 ರ ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ, ಇರ್ಫಾನ್ ಚೆನ್ನಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು ಧೋನಿ ಹೇಳಿಕೆ ನೀಡಿದ್ದರು. ಆದರೆ ಆ ಸರಣಿಯುದ್ದಕ್ಕೂ ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಕೆಲವೊಮ್ಮೆ, ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ತಿರುಚಲಾಗುತ್ತದೆ. ಆದ್ದರಿಂದ ನಾನು ಈ ಬಗ್ಗೆ ಸ್ಪಷ್ಟನೆ ಕೇಳಲು ಬಯಸಿದ್ದೆ. ಹೀಗಾಗಿ ನಾನು ಅವರನ್ನೇ, ಇದಕ್ಕಿಂತ ಚೆನ್ನಾಗಿ ಬೌಲಿಂಗ್ ಮಾಡುವುದು ಹೇಗೆ? ಎಂದು ಕೇಳಿದ್ದೆ.

ಈ ವೇಳೆ ಧೋನಿ, ಆ ಥರ ಏನೂ ಇಲ್ಲ. ಎಲ್ಲವೂ ಯೋಜನೆಯಂತೆ ಚೆನ್ನಾಗಿ ನಡೀತಿದೆ ಎಂದರು. ನಾಯಕನಿಂದಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕ ಮೇಲೆ  ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಷ್ಟೇ.

ಆದರೆ ಇದಾದ ಬಳಿಕ ಕೂಡ ನೀವು ಮತ್ತೆ ಮತ್ತೆ ವಿವರಣೆಗಳನ್ನು ಕೇಳುತ್ತಿದ್ದರೆ, ಅದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ನಮಗೂ ಸ್ವಾಭಿಮಾನ ಇರುತ್ತಲ್ವಾ? 

ನನಗೆ ಯಾರದ್ದಾದರೂ ಕೋಣೆಗೆ ಹೋಗಿ ಹುಕ್ಕಾ ಸೆಟ್ ಮಾಡಿಕೊಡುವ ಅಥವಾ ಅದರ ಬಗ್ಗೆ ಮಾತನಾಡುವ ಅಭ್ಯಾಸ ಇರಲಿಲ್ಲ. ಇವೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯ. ಕೆಲವೊಮ್ಮೆ ನೀವು ಅದರ ಬಗ್ಗೆ ಮಾತನಾಡದಿದ್ದರೆ, ಅದು ಉತ್ತಮ. ಒಬ್ಬ ಕ್ರಿಕೆಟಿಗನ ಕೆಲಸವೆಂದರೆ ಮೈದಾನದಲ್ಲಿ ಪ್ರದರ್ಶನ ನೀಡುವುದು ಮತ್ತು ನಾನು ಅದನ್ನೇ ಕೇಂದ್ರೀಕರಿಸುತ್ತಿದ್ದೆ ಎಂದು ಪಠಾಣ್ ಹೇಳಿದ್ದಾರೆ.

ಇಲ್ಲಿ ಇರ್ಫಾನ್ ಪಠಾಣ್, ಮಹೇಂದ್ರ ಸಿಂಗ್ ಧೋನಿ ತನ್ನ ಪರವಿರುವವರಿಗೆ ಅವಕಾಶ ನೀಡುತ್ತಿದ್ದರು ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ಇದನ್ನೇ ರೂಮ್​ಗೆ ಹೋಗಿ ಅವರಿಗೆ ಹುಕ್ಕಾ ಸೆಟ್ ಮಾಡಿಕೊಡುವ ಅಭ್ಯಾಸ ಇರಲಿಲ್ಲ ಎಂದಿದ್ದಾರೆ. ಅಂದರೆ ಅವಕಾಶಕ್ಕಾಗಿ ಕೆಲವರು ಧೋನಿ ಹೇಳಿದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದರು ಎಂಬದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.

ಇದೀಗ ಇರ್ಫಾನ್ ಪಠಾಣ್ ಅವರ ಸಂದರ್ಶನದ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಇದಕ್ಕೂ ಮುನ್ನ ನನ್ನ ಕೆರಿಯರ್ ಬೇಗನೆ ಕೊನೆಗೊಳ್ಳಲು ಧೋನಿ ಕಾರಣ ಎಂದು ಸಂದರ್ಶನವೊಂದರಲ್ಲಿ ಇರ್ಫಾನ್ ಪಠಾಣ್ ಹೇಳಿದ್ದರು. ನಾನು ಮತ್ತು ಸಹೋದರ ಯೂಸುಫ್ ಪಠಾಣ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದೆವು. ಆದರೆ ಈ ಪಂದ್ಯದ ಬಳಿಕ ಧೋನಿ ನನ್ನನ್ನು ಬೆಂಚ್ ಕಾಯಿಸಿದ್ದರು.

ಈ ಬಗ್ಗೆ ಅಂದಿನ ಕೋಚ್ ಗ್ಯಾರಿ ಕಸ್ಟರ್ನ್​ ನನ್ನ ಕೈಯಲ್ಲಿ ಏನೂ ಇಲ್ಲ ಎಂದಿದ್ದರು. ಅಂದರೆ ನನಗೆ ಅವತ್ತು ಇದರ ಹಿಂದಿರುವುದು ಯಾರ ಕೈ ಎಂಬುದು ಗೊತ್ತಾಯ್ತು. ಆ ವೇಳೆ ನಾಯಕನೇ ಪ್ಲೇಯಿಂಗ್ ಇಲೆವೆನ್ ನಿರ್ಧರಿಸುತ್ತಿದ್ದ. ಆಗ ಭಾರತ ತಂಡದ ನಾಯಕರಾಗಿದ್ದವರು ಮಹೇಂದ್ರ ಸಿಂಗ್ ಧೋನಿ ಎಂದು ಇರ್ಫಾನ್ ಪಠಾಣ್ ಹೇಳಿದ್ದರು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್

ಇದೀಗ ಹುಕ್ಕಾ ಹೇಳಿಕೆಯ ಮೂಲಕ ಇರ್ಫಾನ್ ಪಠಾಣ್ ಪರೋಕ್ಷವಾಗಿ ಮಹೇಂದ್ರ ಸಿಂಗ್ ಧೋನಿ ತನಗೆ ಅನುಕೂಲಕರವಾಗಿರುವ ಆಟಗಾರರಿಗೆ ಅವಕಾಶ ನೀಡುತ್ತಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ಹೇಳಿಕೆಯು ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಾಯಕತ್ವದ ಬಗ್ಗೆ ಚರ್ಚೆ ಶುರುವಾಗಿದೆ.

 

Published On - 2:11 pm, Tue, 2 September 25