18 ವರ್ಷಗಳ ಬಳಿಕ… ಇರ್ಫಾನ್ ಪಠಾಣ್ ಸ್ವಿಂಗ್ಗೆ ಯೂನಿಸ್ ಖಾನ್ ಕ್ಲೀನ್ ಬೌಲ್ಡ್
Pakistan Champions vs India Champions: ಇಂಗ್ಲೆಂಡ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ 19.1 ಓವರ್ಗಳಲ್ಲಿ ಗುರಿ ತುಲುಪಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನ (WCL 2024) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧ ಇಂಡಿಯಾ ಚಾಂಪಿಯನ್ಸ್ ಜಯಭೇರಿ ಬಾರಿಸಿದೆ. ಈ ಜಯದೊಂದಿಗೆ ಇಂಡಿಯಾ ಚಾಂಪಿಯನ್ಸ್ ತಂಡವು ಚೊಚ್ಚಲ WCL ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಇರ್ಫಾನ್ ಪಠಾಣ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು.3 ಓವರ್ಗಳನ್ನು ಎಸೆದಿದ್ದ ಇರ್ಫಾನ್ ಪಠಾಣ್ ಕೇವಲ 12 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಈ ಒಂದು ವಿಕೆಟ್ ಯೂನಿಸ್ ಖಾನ್ ರೂಪದಲ್ಲಿ ಮೂಡಿಬಂದಿತ್ತು. ಅದು ಕೂಡ 18 ವರ್ಷಗಳ ಹಳೆಯ ಸ್ಟೈಲ್ನಲ್ಲಿ ಎಂಬುದು ವಿಶೇಷ.
ಹೌದು, 18 ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಕರಾಚಿ ಟೆಸ್ಟ್ನಲ್ಲಿ ಯೂನಿಸ್ ಖಾನ್ ಅವರನ್ನು ಇನ್ ಸ್ವಿಂಗ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದರು. ಇದೀಗ ಅದೇ ಮಾದರಿಯಲ್ಲೇ ಇನ್ ಸ್ವಿಂಗ್ ಎಸೆದು ಯೂನಿಸ್ ಖಾನ್ ಅವರನ್ನು ಮತ್ತೊಮ್ಮೆ ಪಠಾಣ್ ಬೌಲ್ಡ್ ಮಾಡಿದ್ದಾರೆ. ಈ ಮೂಲಕ ಹಳೆಯ ನೆನಪನ್ನು ಮರಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಇರ್ಫಾನ್ ಪಠಾಣ್ ಅವರ ಇನ್ ಸ್ವಿಂಗ್ ಬೌಲ್ಡ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ 2006 ರ ಕ್ಲೀನ್ ಬೌಲ್ಡ್ ಅನ್ನು ಅಭಿಮಾನಿಗಳು ಮತ್ತೆ ನೋಡಿದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 156 ರನ್ ಕಲೆಹಾಕಿತು. ಈ ಗುರಿಯನ್ನು 19.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಇಂಡಿಯಾ ಚಾಂಪಿಯನ್ಸ್ 5 ವಿಕೆಟ್ಗಳ ಜಯ ಸಾಧಿಸಿದೆ.