Wimbledon 2024 Final: ಇಂದು ಅಲ್ಕರಾಝ್ vs ಜೊಕೊವಿಚ್ ನಡುವೆ ಫೈನಲ್ ಫೈಟ್
Wimbledon 2024 Final: ನೊವಾಕ್ ಜೊಕೊವಿಚ್ ಹಾಗೂ ಕಾರ್ಲೋಸ್ ಅಲ್ಕರಾಝ್ ಈವರೆಗೆ 5 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಜೊಕೊವಿಚ್ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಅಲ್ಕರಾಝ್ 2 ಬಾರಿ ಗೆಲುವು ದಾಖಲಿಸಿದ್ದಾರೆ. ಅದರಲ್ಲೂ ಕಳೆದ ಬಾರಿಯ ವಿಂಬಲ್ಡನ್ ಫೈನಲ್ನಲ್ಲಿ ಇಬ್ಬರು ಸೆಣಸಿದ್ದರು. ಈ ಪಂದ್ಯವು 4 ಗಂಟೆ 42 ನಿಮಿಷಗಳ ಹೋರಾಟಕ್ಕೆ ಸಾಕ್ಷಿಯಾಗಿತ್ತು.
ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ ಹಾಗೂ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಮುಖಾಮುಖಿಯಾಗಲಿದ್ದಾರೆ. ಲಂಡನ್ನ ಸೆಂಟ್ರಲ್ ಕೋರ್ಟ್ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಕಳೆದ ಬಾರಿ ಇದೇ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉಭಯರು ಮುಖಾಮುಖಿಯಾಗಿದ್ದರು. ಈ ವೇಳೆ ಚಾಂಪಿಯನ್ ಪಟ್ಟಕ್ಕಾಗಿ 4 ಗಂಟೆ 42 ನಿಮಿಷಗಳ ಹೋರಾಟ ಕಂಡು ಬಂದಿತ್ತು. ಇದೀಗ ಸೆಂಟ್ರಲ್ ಕೋರ್ಟ್ನಲ್ಲಿ ಯುವ ಮತ್ತು ಅನುಭವಿ ಆಟಗಾರರ ನಡುವೆ ಮತ್ತೆ ಫೈನಲ್ ಫೈಟ್ ಏರ್ಪಡುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ರಣರೋಚಕ ಹೋರಾಟವನ್ನು ಎದುರು ನೋಡಬಹುದು.
ಜೊಕೊವಿಚ್ ಹಾಗೂ ಅಲ್ಕರಾಝ್ ಈವರೆಗೆ 5 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಜೊಕೊವಿಚ್ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಅಲ್ಕರಾಝ್ 2 ಬಾರಿ ಗೆಲುವು ದಾಖಲಿಸಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಉಭಯರು ಎರಡು ಬಾರಿ ಸೆಣಸಿದ್ದು, 2023ರ ವಿಂಬಲ್ಡನ್ ಫೈನಲ್ನಲ್ಲಿ ಜೊಕೊವಿಚ್ಗೆ ಸೋಲುಣಿಸುವಲ್ಲಿ ಅಲ್ಕರಾಝ್ ಯಶಸ್ವಿಯಾಗಿದ್ದರು.
ಹಾಗೆಯೇ 2023ರ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯ ಫೈನಲ್ನಲ್ಲಿ ಅಲ್ಕರಾಝ್ ಅವರನ್ನು ಮಣಿಸಿ ನೊವಾಕ್ ಜೊಕೊವಿಚ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದೀಗ ಟೆನಿಸ್ ಅಂಗಳದ ಅನುಭವಿ ಆಟಗಾರ ಹಾಗೂ ಹೊಸ ಪ್ರತಿಭೆ ನಡುವೆ ಮೂರನೇ ಬಾರಿ ಫೈನಲ್ ಫೈಟ್ ಏರ್ಪಡುತ್ತಿದ್ದು. ಈ ಬಾರಿ ಯಾರು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.