WCL 2024 Final: ಪಾಕ್ ಪಡೆ ತತ್ತರ… ‘ಚಾಂಪಿಯನ್ಸ್’ ಇಂಡಿಯಾ ಚಾಂಪಿಯನ್ಸ್
World Championship of Legends 2024: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ಮಾಜಿ ಆಟಗಾರರ ಟೂರ್ನಿ. ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿದಿದ್ದವು. ಅಂತಿಮ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಅದರಂತೆ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನ (WCL 2024) ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಜಯಭೇರಿ ಬಾರಿಸಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದರು.
2ನೇ ಓವರ್ನ ಕೊನೆಯ ಎಸೆತದಲ್ಲಿ ಶರ್ಜೀಲ್ ಖಾನ್ (12) ವಿಕೆಟ್ ಪಡೆಯುವ ಮೂಲಕ ಅನುರೀತ್ ಸಿಂಗ್ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮಕ್ಸೂದ್ (21) ವಿಕೆಟ್ ಪಡೆಯುವಲ್ಲಿ ವಿನಯ್ ಕುಮಾರ್ ಸಫಲರಾದರು. ಇದರ ನಡುವೆ ಕಮ್ರಾನ್ ಅಕ್ಮಲ್ 19 ಎಸೆತಗಳಲ್ಲಿ 24 ರನ್ ಬಾರಿಸಿದರು.
ಆ ಬಳಿಕ ಬಂದ ಶೊಯೇಬ್ ಮಲಿಕ್ 36 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಮಿಸ್ಬಾ ಉಲ್ ಹಕ್ 18 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು.
ಇಂಡಿಯಾ ಚಾಂಪಿಯನ್ಸ್ ಭರ್ಜರಿ ಬ್ಯಾಟಿಂಗ್:
157 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಕೇವಲ 10 ರನ್ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದಾಗ್ಯೂ ಮರ್ತೋರ್ವ ಆರಂಭಿಕ ಅಂಬಾಟಿ ರಾಯುಡು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಪಾಕಿಸ್ತಾನ್ ಚಾಂಪಿಯನ್ಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ರಾಯುಡು 30 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 50 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುರೇಶ್ ರೈನಾ ಕೇವಲ 3 ರನ್ಗಳಿಸಿ ವಿಎಕಟ್ ಒಪ್ಪಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಗುರುಕೀರತ್ ಸಿಂಗ್ ಮಾನ್ 34 ರನ್ ಕಲೆಹಾಕಲು 33 ಎಸೆತಗಳನ್ನು ಎದುರಿಸಿದರು. ಪರಿಣಾಮ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಈ ಹಂತದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ 16 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 30 ರನ್ ಸಿಡಿಸುವ ಮೂಲಕ ಪಂದ್ಯವು ಮತ್ತೆ ಇಂಡಿಯಾದತ್ತ ವಾಲುವಂತೆ ನೋಡಿಕೊಂಡರು.
ಅಂತಿಮವಾಗಿ ಯುವರಾಜ್ ಸಿಂಗ್ ಅಜೇಯ 15 ರನ್ ಹಾಗೂ ಇರ್ಫಾನ್ ಪಠಾಣ್ ಅಜೇಯ 5 ರನ್ಗಳೊಂದಿಗೆ ಇಂಡಿಯಾ ಚಾಂಪಿಯನ್ಸ್ ತಂಡವನ್ನು 19.1 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವನ್ನು 5 ವಿಕೆಟ್ಗಳಿಂದ ಬಗ್ಗು ಬಡಿದು ಇಂಡಿಯಾ ಚಾಂಪಿಯನ್ಸ್ ಚೊಚ್ಚಲ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಇಂಡಿಯಾ ಚಾಂಪಿಯನ್ಸ್ ವಿನ್ನಿಂಗ್ ರನ್:
The strike with which India Champions made the WCL trophy theirs ❤️#IndvPakonFanCode #WCLonFanCode pic.twitter.com/vqodrKyYTD
— FanCode (@FanCode) July 13, 2024
ಪಾಕಿಸ್ತಾನ್ ಚಾಂಪಿಯನ್ಸ್ ಪ್ಲೇಯಿಂಗ್ 11: ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್) , ಶರ್ಜೀಲ್ ಖಾನ್ , ಸೊಹೈಬ್ ಮಕ್ಸೂದ್ , ಶೋಯೆಬ್ ಮಲಿಕ್ , ಯೂನಿಸ್ ಖಾನ್ (ನಾಯಕ) , ಶಾಹಿದ್ ಅಫ್ರಿದಿ , ಮಿಸ್ಬಾ-ಉಲ್-ಹಕ್ , ಅಮೀರ್ ಯಾಮಿನ್ , ಸೊಹೈಲ್ ತನ್ವಿರ್ , ವಹಾಬ್ ರಿಯಾಜ್ , ಸೊಹೈಲ್ ಖಾನ್ , ಸಯೀದ್ ಅಜ್ಮಲ್.
ಇದನ್ನೂ ಓದಿ: James Anderson: 3 ವಿಶ್ವ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಜೇಮ್ಸ್ ಅ್ಯಂಡರ್ಸನ್
ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಅಂಬಾಟಿ ರಾಯುಡು , ಸುರೇಶ್ ರೈನಾ , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಪವನ್ ನೇಗಿ , ವಿನಯ್ ಕುಮಾರ್ , ಹರ್ಭಜನ್ ಸಿಂಗ್ , ರಾಹುಲ್ ಶುಕ್ಲಾ , ಅನುರೀತ್ ಸಿಂಗ್ , ಗುರುಕೀರತ್ ಸಿಂಗ್ ಮಾನ್.