IND vs SL: ಜುಲೈ 26 ರಿಂದ ಅಲ್ಲ; ಭಾರತ-ಶ್ರೀಲಂಕಾ ಸರಣಿಯ ಹೊಸ ವೇಳಾಪಟ್ಟಿ ಪ್ರಕಟ
IND vs SL: ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ ಮತ್ತು ಆಗಸ್ಟ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಗಳು ನಡೆಯಲಿವೆ. ಈ ಪ್ರವಾಸಕ್ಕಾಗಿ ಬಿಸಿಸಿಐ ಇತ್ತೀಚೆಗೆ ವೇಳಾಪಟ್ಟಿಯನ್ನು ಸಹ ಪ್ರಕಟಿಸಿತ್ತು. ವೇಳಾಪಟ್ಟಿಯ ಪ್ರಕಾರ ಈ ಪ್ರವಾಸ ಜುಲೈ 26 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಈ ಪ್ರವಾಸದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.
ಜಿಂಬಾಬ್ವೆ ಬಳಿಕ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದೆ. ಈ ಪ್ರವಾಸದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಜುಲೈ ಮತ್ತು ಆಗಸ್ಟ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಗಳು ನಡೆಯಲಿವೆ. ಈ ಪ್ರವಾಸಕ್ಕಾಗಿ ಬಿಸಿಸಿಐ ಇತ್ತೀಚೆಗೆ ವೇಳಾಪಟ್ಟಿಯನ್ನು ಸಹ ಪ್ರಕಟಿಸಿತ್ತು. ವೇಳಾಪಟ್ಟಿಯ ಪ್ರಕಾರ ಈ ಪ್ರವಾಸ ಜುಲೈ 26 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಈ ಪ್ರವಾಸದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಅದರಂತೆ ಈ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ನೂತನ ವೇಳಾಪಟ್ಟಿಯ ಪ್ರಕಾರ ಭಾರತದ ಶ್ರೀಲಂಕಾ ಪ್ರವಾಸ ಜುಲೈ 27 ರಿಂದ ಆರಂಭವಾಗಲಿದೆ. ಅಂದರೆ ಉಭಯ ತಂಡಗಳ ನಡುವೆ ಮೊದಲ ಟಿ20 ಪಂದ್ಯ ಜುಲೈ 26 ರ ಬದಲು ಜುಲೈ 27 ರಂದು ನಡೆಯಲ್ಲಿದೆ.
ವೇಳಾಪಟ್ಟಿಯಲ್ಲಿ ಬದಲಾವಣೆ
ಈ ಪ್ರವಾಸದಲ್ಲಿ ದಿನಾಂಕ ಮಾತ್ರ ಬದಲಾಗಿದ್ದು, ಉಳಿದಂತೆ ಎಲ್ಲಾ ಪಂದ್ಯಗಳು ನಿಗದಿತ ಸ್ಥಳದಲ್ಲಿ ಹಾಗೂ ನಿಗದಿತ ಸಮಯದಲ್ಲಿ ಆರಂಭವಾಗಲಿವೆ. ಟಿ20 ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಮತ್ತು ಮೂರು ಏಕದಿನ ಪಂದ್ಯಗಳನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಲಾಗುವುದು. ಹಳೆಯ ವೇಳಾಪಟ್ಟಿಯ ಪ್ರಕಾರ, ಮೂರು ಟಿ20 ಪಂದ್ಯಗಳ ದಿನಾಂಕಗಳು ಕ್ರಮವಾಗಿ ಜುಲೈ 26, 27 ಮತ್ತು ಜುಲೈ 29 ರಂದು ನಿಗದಿ ಪಡಿಸಲಾಗಿತ್ತು. ಈಗ ಈ ಪಂದ್ಯಗಳು ಜುಲೈ 27, ಜುಲೈ 28 ಮತ್ತು ಜುಲೈ 30 ರಂದು ನಡೆಯಲಿವೆ. ಅದೇ ಸಮಯದಲ್ಲಿ, ಏಕದಿನ ಸರಣಿಯ ಪಂದ್ಯಗಳು ಈಗ ಆಗಸ್ಟ್ 2, 4 ಮತ್ತು ಆಗಸ್ಟ್ 7 ರಂದು ನಡೆಯಲಿವೆ.
UPDATE 🚨
A look at the revised schedule for #TeamIndia‘s upcoming tour of Sri Lanka #SLvIND pic.twitter.com/HLoTTorOV7
— BCCI (@BCCI) July 13, 2024
ನಿಗದಿತ ಸಮಯಕ್ಕೆ ಆರಂಭ
ಮೇಲೆ ಹೇಳಿದಂತೆ ಪಂದ್ಯಗಳ ಆರಂಭದ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ರಿಂದ ನಡೆಯಲಿವೆ. ಅದೇ ಸಮಯದಲ್ಲಿ, ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತವೆ. ಈ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕರಾಗಿದ್ದರೆ, ಕೆಎಲ್ ರಾಹುಲ್ ಅವರಿಗೆ ಏಕದಿನ ತಂಡದ ನಾಯಕತ್ವವನ್ನು ನೀಡುವ ಸಾಧ್ಯತೆಗಳಿವೆ.
2021ರ ನಂತರ ಮೊದಲ ಶ್ರೀಲಂಕಾ ಪ್ರವಾಸ
2021 ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಟೀಮ್ ಇಂಡಿಯಾ ಕೊನೆಯದಾಗಿ ಶ್ರೀಲಂಕಾಕ್ಕೆ ಭೇಟಿ ನೀಡಿತ್ತು. ಆಗ ಶಿಖರ್ ಧವನ್ ಕೈಗೆ ಭಾರತ ತಂಡದ ಕಮಾಂಡ್ ನೀಡಲಾಗಿತ್ತು. ಟೀಂ ಇಂಡಿಯಾ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದರೆ, ಟಿ20 ಸರಣಿಯಲ್ಲಿ 1-2 ಅಂತರದಿಂದ ಸೋಲನುಭವಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಶ್ರೀಲಂಕಾ ಪ್ರವಾಸಕ್ಕೆ ಬಲಿಷ್ಠ ತಂಡವನ್ನು ಕಳುಹಿಸಲು ಬಿಸಿಸಿಐ ಬಯಸಿದೆ. ಆದಾಗ್ಯೂ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಈ ಪ್ರವಾಸದ ಭಾಗವಾಗುವುದಿಲ್ಲ ಎಂಬ ವರದಿಗಳಿವೆ.
ಸರಣಿಯ ಹೊಸ ವೇಳಾಪಟ್ಟಿ
- ಜುಲೈ 27 – ಮೊದಲನೇ ಟಿ20
- ಜುಲೈ 28 – ಎರಡನೇ ಟಿ20
- 30 ಜುಲೈ – ಮೂರನೇ ಟಿ20
- 2 ಆಗಸ್ಟ್ – ಮೊದಲನೇ ಏಕದಿನ
- 4 ಆಗಸ್ಟ್ – ಎರಡನೇ ಏಕದಿನ
- 7 ಆಗಸ್ಟ್ – ಮೂರನೇ ಏಕದಿನ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Sat, 13 July 24