IND vs BAN: ಕ್ಯಾಚ್ ಬಿಟ್ಟ ರೋಹಿತ್, ರಾಹುಲ್, ಹಾರ್ದಿಕ್; 3 ಜೀವದಾನದ ಲಾಭ ಪಡೆದ ಬಾಂಗ್ಲಾದೇಶ

|

Updated on: Feb 20, 2025 | 5:46 PM

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರೂ, ಕಳಪೆ ಫೀಲ್ಡಿಂಗ್ ನಿರಾಶೆ ಮೂಡಿಸಿತು. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟು ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಜೀವದಾನ ನೀಡಿದರು. ಈ ತಪ್ಪುಗಳಿಂದ ಬಾಂಗ್ಲಾದೇಶ ಭರ್ಜರಿ ಮೊತ್ತ ದಾಖಲಿಸಿತು. ಭಾರತ ತಂಡದ ಫೀಲ್ಡಿಂಗ್ ಸುಧಾರಣೆ ಅತ್ಯಗತ್ಯ ಎಂಬುದು ಸ್ಪಷ್ಟ.

IND vs BAN: ಕ್ಯಾಚ್ ಬಿಟ್ಟ ರೋಹಿತ್, ರಾಹುಲ್, ಹಾರ್ದಿಕ್; 3 ಜೀವದಾನದ ಲಾಭ ಪಡೆದ ಬಾಂಗ್ಲಾದೇಶ
ರೋಹಿತ್, ಹಾರ್ದಿಕ್
Follow us on

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಬೌಲಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿತು. ಆದರೆ ತನ್ನ ಕಳಪೆ ಫೀಲ್ಡಿಂಗ್ ಮೂಲಕ ಬಹಳಷ್ಟು ನಿರಾಶೆಗೊಳಿಸಿತು. ಟಾಸ್ ಸೋತು ಬಾಂಗ್ಲಾದೇಶ ವಿರುದ್ಧ ಮೊದಲು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವಿಕೆಟ್​ಗಳನ್ನು ಪಡೆಯುವ ಅವಕಾಶಗಳನ್ನು ಕೈಚೆಲ್ಲಿದೆ. ಅಚ್ಚರಿಯ ವಿಷಯವೆಂದರೆ ಈ ಮೂರು ತಪ್ಪುಗಳನ್ನು ತಂಡದ ಹಿರಿಯ ಆಟಗಾರರೇ ಮಾಡಿದ್ದಾರೆ. ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲ ತಪ್ಪು ಮಾಡಿದರೆ, ಇದಾದ ನಂತರ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳಿಗೆ ಜೀವದಾನ ನೀಡಿದರು. ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಬಾಂಗ್ಲಾ ಬ್ಯಾಟರ್​ಗಳು ಭರ್ಜರಿ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಸುಲಭ ಕ್ಯಾಚ್ ಕೈಬಿಟ್ಟ ರೋಹಿತ್

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 9ನೇ ಓವರ್​ನಲ್ಲಿ ಕ್ಯಾಚ್ ಬಿಡುವ ಮೂಲಕ ಮೊದಲ ತಪ್ಪು ಮಾಡಿದರು. ಈ ತಪ್ಪು ಎಲ್ಲರ ಹೃದಯವನ್ನು ಒಡೆಯುವಷ್ಟು ನೋವುಂಟು ಮಾಡಿತು. ಏಕೆಂದರೆ ರೋಹಿತ್ ಈ ಕ್ಯಾಚ್ ಹಿಡಿದಿದ್ದರೆ ಅಕ್ಷರ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಪೂರ್ಣಗೊಳಿಸುತ್ತಿದ್ದರು. ಅಕ್ಷರ್ ಪಟೇಲ್ ತಮ್ಮ ಮೊದಲ ಓವರ್​ನಲ್ಲೇ ಸತತ 2 ವಿಕೆಟ್ ಕಬಳಿಸಿದ್ದರು. ಹೀಗಾಗಿ ಬ್ಯಾಟಿಂಗ್​ಗೆ ಬಂದ ಜೇಕರ್ ಅಲಿ ತಮ್ಮ ಮೊದಲ ಎಸೆತದಲ್ಲೇ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್​ಗೆ ಸುಲಭ ಕ್ಯಾಚ್ ನೀಡಿದರು. ಆದರೆ ಹಿಟ್​ಮ್ಯಾನ್ ಈ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು.

ಎಚ್ಚರ ತಪ್ಪಿದ ಹಾರ್ದಿಕ್ ಪಾಂಡ್ಯ

ರೋಹಿತ್ ಶರ್ಮಾ ನಂತರ, ಹಾರ್ದಿಕ್ ಪಾಂಡ್ಯ ಕೂಡ ಕ್ಯಾಚ್ ಕೈಬಿಟ್ಟು ತಪ್ಪು ಮಾಡಿದರು. ಕುಲ್ದೀಪ್ ಯಾದವ್ ಎಸೆತದಲ್ಲಿ ತೌಹೀದ್ ಹೃದಯ್ ನೀಡಿದ ಸುಲಭ ಕ್ಯಾಚ್ ಅನ್ನು ಪಾಂಡ್ಯ ಕೈಬಿಟ್ಟರು. ಇದು ತುಂಬಾ ಸುಲಭವಾದ ಕ್ಯಾಚ್ ಆಗಿತ್ತು. ಆದಾಗ್ಯೂ ಕ್ಯಾಚ್ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಪಾಂಡ್ಯ ಸುಲಭ ಕ್ಯಾಚ್ ಕೈಚೆಲ್ಲಿದರು. ಆಘಾತಕ್ಕಾರಿ ವಿಷಯವೆಂದರೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸಿಕ್ಕ ಜೀವದಾನವನ್ನು ಅರ್ಧಶತಕಗವನ್ನಾಗಿ ಪರಿವರ್ತಿಸಿದರು.

ಸ್ಟಂಪ್ ಮಿಸ್ ಮಾಡಿದ ರಾಹುಲ್

23ನೇ ಓವರ್‌ನಲ್ಲಿ ಕೆಎಲ್ ರಾಹುಲ್ ಕೂಡ ಜೇಕರ್ ಅಲಿಗೆ ಮತ್ತೊಂದು ಜೀವದಾನ ನೀಡಿದರು. ರಾಹುಲ್, ಜೇಕರ್ ಅಲಿಯನ್ನು ಸ್ಟಂಪ್ ಮಾಡುವ ಸುಲಭ ಅವಕಾಶವನ್ನು ಕಳೆದುಕೊಂಡರು. ರವೀಂದ್ರ ಜಡೇಜಾ ಅವರ ಎಸೆತದಲ್ಲಿ ಕೆಎಲ್ ರಾಹುಲ್ ಈ ತಪ್ಪು ಮಾಡಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಇದರ ಲಾಭ ಪಡೆದು ಶತಕದ ಪಾಲುದಾರಿಕೆ ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Thu, 20 February 25