ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ (Asian Games 2023) ಭಾರತ ಪುರುಷ ಹಾಗೂ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಮಹಿಳಾ ತಂಡದಲ್ಲಿ ಹೆಚ್ಚು ಆವಿಷ್ಕಾರಕ್ಕೆ ಮುಂದಾಗದ ಬಿಸಿಸಿಐ (BCCI), ಪುರುಷರ ತಂಡದ ಆಯ್ಕೆಯಲ್ಲಿ ಅಚ್ಚರಿ ಮೂಡಿಸಿದೆ. ಈ ಹಿಂದೆ ವರದಿಯಾಗಿದ್ದ ಎಲ್ಲಾ ಊಹಾಪೋಹಗಳನ್ನು ತಪ್ಪಾಗಿ ಸಾಬೀತುಪಡಿಸಿರುವ ಬಿಸಿಸಿಐ, ಶಿಖರ್ ಧವನ್ಗೆ (Shikhar Dhawan) ತಂಡದ ನಾಯಕತ್ವವನ್ನು ನೀಡುವುದಿರಲಿ ಕನಿಷ್ಠ ಪಕ್ಷ ತಂಡದಲ್ಲೂ ಅವಕಾಶ ನೀಡಿಲ್ಲ. ಹೀಗಾಗಿ ತಂಡದ ಸಾರಥ್ಯವನ್ನು ಯುವ ಬ್ಯಾಟರ್ ರುತುರಾಜ್ ಗಾಯಕ್‌ವಾಡ್‌ಗೆ ಹಸ್ತಾಂತರಿಸಿದ್ದು, ರಿಂಕು ಸಿಂಗ್ (Rinku Singh), ಜಿತೇಶ್ ಶರ್ಮಾ, ಶಿವಂ ದುಬೆ ಸೇರಿದಂತೆ ಹಲವು ಐಪಿಎಲ್ ಸ್ಟಾರ್ಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
19ನೇ ಏಷ್ಯನ್ ಕ್ರೀಡಾಕೂಟವು ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಆರಂಭವಾಗಲಿದ್ದು ಈ ಬಾರಿ ಮಹಿಳಾ ಮತ್ತು ಪುರುಷರ ಟಿ20 ಕ್ರಿಕೆಟ್ ಅನ್ನು ಸಹ ಈ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಬಿಸಿಸಿಐ ಅನುಮತಿ ನೀಡಿದ್ದು, ಇದೀಗ ಮಂಡಳಿಯು ಎರಡೂ ತಂಡಗಳನ್ನು ಪ್ರಕಟಿಸಿದೆ.
NEWS ?- Team India (Senior Men) squad for 19th Asian Games: Ruturaj Gaikwad (Captain), Yashasvi Jaiswal, Rahul Tripathi, Tilak Varma, Rinku Singh, Jitesh Sharma (wk), Washington Sundar, Shahbaz Ahmed, Ravi Bishnoi, Avesh Khan, Arshdeep Singh, Mukesh Kumar, Shivam Mavi, Shivam…
— BCCI (@BCCI) July 14, 2023
IND vs AFG: ಏಷ್ಯನ್ ಗೇಮ್ಸ್ ಆಡಲಿದೆ ಟೀಂ ಇಂಡಿಯಾ; ಅಫ್ಘಾನ್ ವಿರುದ್ಧದ ಏಕದಿನ ಸರಣಿ ಮುಂದೂಡಿಕೆ!
ಈ ಮೊದಲೇ ಹೇಳಿದಂತೆ ಭಾರತ ಪುರುಷ ತಂಡದಲ್ಲಿ ಪ್ರಮುಖ ಹೆಸರುಗಳಿಲ್ಲ. ಅದಕ್ಕೆ ಪ್ರಮುಖ ಕಾರಣವೂ ಇದ್ದು, ಏಷ್ಯನ್ ಗೇಮ್ಸ್ ಜೊತೆಗೆ ಟೀಂ ಇಂಡಿಯಾ ಏಷ್ಯಾಕಪ್ ಹಾಗೂ ವಿಶ್ವಕಪ್ ಆಡಬೇಕಿದೆ. ಆದ್ದರಿಂದ ಹಿರಿಯ ಭಾರತ ತಂಡವನ್ನು ಈ ಎರಡೂ ಟೂರ್ನಿಗಳಿಗಾಗಿ ಮೀಸಲಿಟ್ಟಿರುವ ಬಿಸಿಸಿಐ, ಭಾರತ ಬಿ ತಂಡವನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸುತ್ತಿದೆ. ಹೀಗಾಗಿ ಹಿರಿಯರ ಅನುಪಸ್ಥಿತಿಯಲ್ಲಿ ಅನುಭವಿ ಶಿಖರ್ ಧವನ್ಗೆ ತಂಡದ ನಾಯಕತ್ವ ನೀಡಬಹುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಎಲ್ಲರನ್ನೂ ಅಚ್ಚರಿಗೊಳಿಸಿರುವ ಬಿಸಿಸಿಐ, ಧವನ್ಗೆ ನಾಯಕತ್ವವಿರಲಿ, ತಂಡದಲ್ಲಿ ಸ್ಥಾನ ಕೂಡ ನೀಡಿಲ್ಲ.
ಆಯ್ಕೆಗಾರರು ನಾಯಕತ್ವದ ಜವಾಬ್ದಾರಿಯನ್ನು ಮಹಾರಾಷ್ಟ್ರದ ನಾಯಕ ಮತ್ತು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ರುತುರಾಜ್ ಗಾಯಕ್‌ವಾಡ್‌ಗೆ ವಹಿಸಿದ್ದಾರೆ. ಗಾಯಕ್ವಾಡ್ ಅವರ ನಾಯಕತ್ವದ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ಜವಾಬ್ದಾರಿಯನ್ನು ನೀಡಲಾಗಿದೆ. ಇವರಲ್ಲದೆ, ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಕೂಡ ತಂಡದಲ್ಲಿದ್ದಾರೆ.
ಅಷ್ಟೇ ಅಲ್ಲ ರಿಂಕು ಸಿಂಗ್ ಹಾಗೂ ಪಂಜಾಬ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪ್ರಭಾಸಿಮ್ರಾನ್ ಸಿಂಗ್ ಕೂಡ ಇದೇ ಮೊದಲ ಬಾರಿಗೆ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ20 ಸರಣಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ರಿಂಕು ಸಿಂಗ್ ಹೆಸರು ಇದರಲ್ಲಿ ವಿಶೇಷವಾಗಿದೆ. ಈ ಇಬ್ಬರೂ ಆಟಗಾರರು ಐಪಿಎಲ್ 2023ರ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ಪುರುಷರ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).
ಸ್ಟ್ಯಾಂಡ್‌ಬೈ ಆಟಗಾರರು- ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ ಮತ್ತು ಸಾಯಿ ಸುದರ್ಶನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ