ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸರಣಿಗಾಗಿ ನಾಲ್ವರು ಆಟಗಾರರನ್ನು ಮೀಸಲು ಪಟ್ಟಿಯಲ್ಲಿರಿಸಲಾಗಿದೆ.
ಅಂದರೆ ಟೀಮ್ ಇಂಡಿಯಾದ ಯಾವುದಾದರು ಆಟಗಾರರು ಗಾಯಗೊಂಡರೆ, ಮೀಸಲು ಆಟಗಾರರ ಪಟ್ಟಿಯಿಂದ ಬದಲಿಯಾಗಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಮೂವರು ವೇಗಿಗಳು ಹಾಗೂ ಓರ್ವ ಆಲ್ರೌಂಡರ್ನನ್ನು ಮೀಸಲು ಆಟಗಾರರಾಗಿ ಹೆಸರಿಸಲಾಗಿದೆ.
ಅವರೆಂದರೆ… ಮಯಾಂಕ್ ಯಾದವ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಹಾಗೂ ನಿತೀಶ್ ಕುಮಾರ್ ರೆಡ್ಡಿ. ಇಲ್ಲಿ ಮಯಾಂಕ್, ಹರ್ಷಿತ್, ಪ್ರಸಿದ್ಧ್ ಕೃಷ್ಣ ವೇಗಿಗಳಾಗಿ ಆಯ್ಕೆಯಾದರೆ, ನಿತೀಶ್ ರೆಡ್ಡಿ ಹೆಚ್ಚುವರಿ ಆಲ್ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ. ಈ ಆಟಗಾರರು ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೇಳೆ ಟೀಮ್ ಇಂಡಿಯಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಮುಂದಿಟ್ಟುಕೊಂಡು ಈ ಬಾರಿ ಮೀಸಲು ಆಟಗಾರರ ಪಟ್ಟಿಯಲ್ಲಿ ವೇಗಿಗಳಿಗೆ ಮಣೆ ಹಾಕಲಾಗಿದೆ. ಪ್ರಸ್ತುತ ಭಾರತ ತಂಡದಲ್ಲಿ ವೇಗದ ಬೌಲರ್ಗಳಾಗಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಕಾಣಿಸಿಕೊಂಡಿದ್ದಾರೆ. ಇದೀಗ ಮೀಸಲು ವೇಗದ ಬೌಲರ್ಗಳಾಗಿ ಹರ್ಷಿತ್ ರಾಣಾ, ಮಯಾಂಕ್ ಯಾದವ್, ಪ್ರಸಿದ್ಧ್ ಕೃಷ್ಣಗೆ ಚಾನ್ಸ್ ನೀಡಲಾಗಿದೆ. ಹಾಗೆಯೇ ಆಲ್ರೌಂಡರ್ ಆಗಿ ರಿಸರ್ವ್ ಪಟ್ಟಿಯಲ್ಲಿ ಆಯ್ಕೆಯಾಗಿರುವ ನಿತೀಶ್ ರೆಡ್ಡಿ ಕೂಡ ವೇಗದ ಬೌಲಿಂಗ್ ಆಲ್ರೌಂಡರ್ ಎಂಬುದು ವಿಶೇಷ. ಅಂದರೆ ಇಲ್ಲಿ ವೇಗಿಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಒತ್ತು ನೀಡಿರುವುದು ಸ್ಪಷ್ಟ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೇಲ್ (ವಿಕೆಟ್ ಕೀಪರ್), ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಮೀಸಲು ಆಟಗಾರರು:- ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಮಯಾಂಕ್ ಯಾದವ್ ಹಾಗೂ ನಿತೀಶ್ ಕುಮಾರ್ ರೆಡ್ಡಿ.
ಇದನ್ನೂ ಓದಿ: ಸಿರಾಜ್ ಈಗ ಡಿಎಸ್ಪಿ: ಟೀಮ್ ಇಂಡಿಯಾಗೆ ಹೇಳ್ತಾರಾ ಗುಡ್ ಬೈ?
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅಕ್ಟೋಬರ್ 24 ರಿಂದ ಶುರುವಾಗಲಿರುವ 2ನೇ ಪಂದ್ಯಕ್ಕೆ ಪುಣೆ ಎಂಸಿಎ ಸ್ಟೇಡಿಯಂ ಆತಿಥ್ಯವಹಿಸಲಿದ್ದು, ಹಾಗೆಯೇ ನವೆಂಬರ್ 1 ರಿಂದ ಆರಂಭವಾಗಲಿರುವ ಮೂರನೇ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
Published On - 2:28 pm, Sat, 12 October 24