
ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರುಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ (Rohit Sharma) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಜುಲೈ 19 ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯವು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಮಗನ ಕೊನೆಯ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕಣ್ತುಂಬಿಕೊಳ್ಳಲು ರೋಹಿತ್ ಅವರ ಪೋಷಕರಾದ ಗುರುನಾಥ್ ಶರ್ಮಾ ಮತ್ತು ಪೂರ್ಣಿಮಾ ಶರ್ಮಾ ಲಂಡನ್‌ಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಕಳೆದ ವಾರ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿ ಟೀಂ ಇಂಡಿಯಾದ ದೀರ್ಘಕಾಲೀನ ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಅದರಂತೆ 2027 ರ ಏಕದಿನ ವಿಶ್ವಕಪ್‌ಗೆ ರೋಹಿತ್ ಅವರನ್ನು ಪರಿಗಣಿಸುತ್ತಿಲ್ಲ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಕೊನೆಯ ಅಂತರರಾಷ್ಟ್ರೀಯ ಸರಣಿಯಾಗಿರಬಹುದು ಎಂದು ಆಯ್ಕೆದಾರರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆಯ್ಕೆ ಸಮಿತಿಯು ರೋಹಿತ್ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಭವಿಷ್ಯದ ಆರಂಭಿಕ ಆಟಗಾರನಾಗಿ ಆಡಿಸಲು ಯೋಜನೆ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇದು ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯವೇ ಎಂಬುದರ ಕುರಿತು ಇನ್ನೂ ಯಾವುದೇ ಘೋಷಣೆಯಾಗಿಲ್ಲ, ಅಥವಾ ಬಿಸಿಸಿಐ ಕೂಡ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ವರದಿಗಳ ಪ್ರಕಾರ, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ರೋಹಿತ್ ಅವರ ಕೊನೆಯ ಪಂದ್ಯವಾಗಬೇಕಿತ್ತು, ಆದರೆ ಆ ಸರಣಿಯಲ್ಲಿ ಅರ್ಧಶತಕ ಬಾರಿಸಿದ್ದರಿಂದ ಆಯ್ಕೆದಾರರು ಈ ನಿರ್ಧಾರವನ್ನು ಮುಂದೂಡಿದರು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಪ್ರಸ್ತುತ ಸರಣಿಯಲ್ಲಿ ರೋಹಿತ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ 11 ರನ್ ಗಳಿಸಿದ್ದ ರೋಹಿತ್ ಕಾರ್ಡಿಫ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 47 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿದ್ದರು. ರೋಹಿತ್ ಅವರ ಈ ಪ್ರದರ್ಶನ ಆಯ್ಕೆದಾರರನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ.
ರೋಹಿತ್ ಶರ್ಮಾ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಯಾವಾಗ ನಡೆಯಲಿದೆ?
ರೋಹಿತ್ ಶರ್ಮಾ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎರಡು ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಭಾರತವನ್ನು ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಬಳಿಕ ಜೂನ್ 29, 2024 ರಂದು ರೋಹಿತ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ತರುವಾಯ, ಮೇ 2025 ರಲ್ಲಿ, ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈಗ, ಲಾರ್ಡ್ಸ್‌ನಲ್ಲಿ, ಅವರು ತಮ್ಮ 50-ಓವರ್‌ಗಳ ಸ್ವರೂಪದ ವೃತ್ತಿಜೀವನವನ್ನು ಸಹ ಕೊನೆಗೊಳಿಸಬಹುದು.