ಬರೋಬ್ಬರಿ 397 ರನ್​ಗಳು: ನಾಕೌಟ್​ನಲ್ಲಿ ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Nov 15, 2023 | 8:11 PM

Team India: ಮೊದಲ ವಿಕೆಟ್​ಗೆ 71 ರನ್​ಗಳ ಜೊತೆಯಾಟವಾಡಿದ ಬಳಿಕ ರೋಹಿತ್ ಶರ್ಮಾ (47) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಸಿಡಿಸಿ ಕಿಂಗ್ ಕೊಹ್ಲಿ (117) ಹೊಸ ಇತಿಹಾಸ ನಿರ್ಮಿಸಿದರು.

ಬರೋಬ್ಬರಿ 397 ರನ್​ಗಳು: ನಾಕೌಟ್​ನಲ್ಲಿ ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ
Team India
Follow us on

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಸ್ಪೋಟಕ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 71 ರನ್​ಗಳ ಜೊತೆಯಾಟವಾಡಿದ ಬಳಿಕ ರೋಹಿತ್ ಶರ್ಮಾ (47) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಸಿಡಿಸಿ ಕಿಂಗ್ ಕೊಹ್ಲಿ (117) ಹೊಸ ಇತಿಹಾಸ ನಿರ್ಮಿಸಿದರು. ಹಾಗೆಯೇ ಶುಭ್​ಮನ್ ಗಿಲ್ 80 ರನ್​ಗಳ ಕೊಡುಗೆ ನೀಡಿದರು.

ಇನ್ನು 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 105 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ಕೆಎಲ್ ರಾಹುಲ್ 39 ರನ್​ಗಳ ಕಾಣಿಕೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 397 ರನ್​ ಕಲೆಹಾಕಿತು.

  • ವಿಶೇಷ ಎಂದರೆ ಇದು ಏಕದಿನ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ತಂಡವೊಂದು ಕಲೆಹಾಕಿದ ಗರಿಷ್ಠ ಸ್ಕೋರ್. ಇದಕ್ಕೂ ಮುನ್ನ 2015ರ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 328 ರನ್ ಬಾರಿಸಿ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು ಭಾರತ ತಂಡ ಅಳಿಸಿ ಹಾಕಿದೆ.
  • ಅಷ್ಟೇ ಅಲ್ಲದೆ ಏಕದಿನ ವಿಶ್ವಕಪ್​ನ ನಾಕೌಟ್​ (ಕ್ವಾಟರ್​ ಫೈನಲ್​/ ಸೆಮಿಫೈನಲ್/ಫೈನಲ್) ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ 2015 ರ ಏಕದಿನ ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಝಿಲೆಂಡ್ 393 ರನ್​ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ನ್ಯೂಝಿಲೆಂಡ್ ವಿರುದ್ಧ 397 ರನ್ ಬಾರಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
  • ಹಾಗೆಯೇ ಏಕದಿನ ವಿಶ್ವಕಪ್​ನ ನಾಕೌಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಕಲೆಹಾಕಿದ ಗರಿಷ್ಠ ಸ್ಕೋರ್ ಕೂಡ ಇದಾಗಿದೆ. ಭಾರತ ತಂಡವು 2015 ರ ಕ್ವಾರ್ಟರ್ ಫೈನಲ್​ನಲ್ಲಿ ಬಾಂಗ್ಲಾದೇಶ್ ವಿರುದ್ಧ 302 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 397 ರನ್​ಗಳೊಂದಿಗೆ ಟೀಮ್ ಇಂಡಿಯಾ ಹೊಸ ದಾಖಲೆ ನಿರ್ಮಿಸಿದೆ.
  • ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು 397 ರನ್​ ಬಾರಿಸಲು ಒಟ್ಟು 19 ಸಿಕ್ಸರ್​ಗಳನ್ನು ಸಿಡಿಸಿದ್ದರು. ಇದು ಕೂಡ ಹೊಸ ವಿಶ್ವ ದಾಖಲೆ ಎಂಬುದು ವಿಶೇಷ. ಅಂದರೆ ಏಕದಿನ ವಿಶ್ವಕಪ್​ ನಾಕೌಟ್ ಪಂದ್ಯಗಳಲ್ಲಿ ಯಾವುದೇ ತಂಡ 19 ಸಿಕ್ಸ್​ಗಳನ್ನು ಸಿಡಿಸಿರಲಿಲ್ಲ.
  • 2015 ರ ವಿಶ್ವಕಪ್ ಕ್ವಾರ್ಟರ್​ ಫೈನಲ್​ನಲ್ಲಿ ನ್ಯೂಝಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ದಾಂಡಿಗರು 16 ಸಿಕ್ಸ್​ಗಳನ್ನು ಬಾರಿಸಿದ್ದರು. ಇದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ವಿಶ್ವಕಪ್​ ಸೆಮಿಫೈನಲ್​ನಲ್ಲಿ 19 ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟರ್​ಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ ಬ್ಯಾಟರ್​ಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ.