
ಗೆದ್ದಿದ್ದು ಟೀಮ್ ಇಂಡಿಯಾ. ಸೋತಿದ್ದು ಆಸ್ಟ್ರೇಲಿಯಾ. ಕನಸು ನುಚ್ಚುನೂರಾಗಿದ್ದ ಪಾಕಿಸ್ತಾನದ್ದು. ಹೌದು, 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ಆಯೋಜಿಸಿರುವ ಪಾಕಿಸ್ತಾನದ ಕನಸಿಗೆ ಭಾರತ ತಂಡ ಕೊಳ್ಳಿ ಇಟ್ಟಿದೆ. ಅದು ಸಹ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯುವ ಮೂಲಕ.
ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಸ್ಟೀವ್ ಸ್ಮಿತ್ (73) ಅವರ ಅರ್ಧಶತಕ ಹಾಗೂ ಅಲೆಕ್ಸ್ ಕ್ಯಾರಿ (61) ಹಾಫ್ ಸೆಂಚುರಿಯೊಂದಿಗೆ ಆಸ್ಟ್ರೇಲಿಯಾ ತಂಡ 49.3 ಓವರ್ಗಳಲ್ಲಿ 264 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಶುಭ್ಮನ್ ಗಿಲ್ (8) ಹಾಗೂ ರೋಹಿತ್ ಶರ್ಮಾ (28) ಬೇಗನೆ ಔಟಾಗಿದ್ದರಿಂದ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಇನಿಂಗ್ಸ್ ಕಟ್ಟಿದರು.
ಮೂರನೇ ವಿಕೆಟ್ಗೆ 91 ರನ್ಗಳ ಜೊತೆಯಾಟವಾಡಿದ ಬಳಿಕ ಶ್ರೇಯಸ್ ಅಯ್ಯರ್ (45) ಔಟಾದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಕೊಹ್ಲಿ 98 ಎಸೆತಗಳಲ್ಲಿ 84 ರನ್ ಬಾರಿಸಿ ಟೀಮ್ ಇಂಡಿಯಾದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಭಾರತ ತಂಡ 48.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 267 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಫೈನಲ್ಗೇರಿದೆ.
ಇತ್ತ ಟೀಮ್ ಇಂಡಿಯಾ ಫೈನಲ್ಗೇರುತ್ತಿದ್ದಂತೆ ಅತ್ತ ಪಾಕಿಸ್ತಾನದ ಕನಸು ನುಚ್ಚುನೂರಾಗಿದೆ. ಅಂದರೆ 29 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯವಹಿಸಿರುವ ಪಾಕಿಸ್ತಾನಕ್ಕೆ ಫೈನಲ್ ಮ್ಯಾಚ್ ಆಯೋಜಿಸುವ ಅವಕಾಶ ಕೈತಪ್ಪಿದೆ.
ಏಕೆಂದರೆ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ಗೇರಿದರೆ ಅಂತಿಮ ಪಂದ್ಯವನ್ನು ದುಬೈನಲ್ಲೇ ಆಯೋಜಿಸಲು ಈ ಮೊದಲೇ ನಿರ್ಧರಿಸಲಾಗಿತ್ತು. ಅದರಂತೆ ಇದೀಗ ಭಾರತ ತಂಡ ಫೈನಲ್ಗೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಆಯೋಜನೆಗೊಳ್ಳುವುದು ಖಚಿತವಾಗಿದೆ. ಫೈನಲ್ ಮ್ಯಾಚ್ ಎಲ್ಲಿ ಎಂಬುದು ಖಚಿತವಾಗುತ್ತಿದ್ದಂತೆ 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ಮಹತ್ವದ ಪಂದ್ಯವನ್ನು ಆಯೋಜಿಸುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಕನಸು ನುಚ್ಚುನೂರಾಗಿದೆ.