ಇಂದು ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ: ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ಪ್ರೇಮದಾಸ ಸ್ಟೇಡಿಯಂ

|

Updated on: Sep 10, 2023 | 6:38 AM

India vs Pakistan, Asia Cup Super 4: ಏಷ್ಯಾಕಪ್ 2023 ರಲ್ಲಿ ಇಂದು ನಡೆಯಲಿರುವ ಸೂಪರ್-4 ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳು ಮುಖಾಮುಖಿ ಆಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ, ತನ್ನ ಕೊನೆಯ 8 ಪಂದ್ಯಗಳಲ್ಲಿ 7 ಅನ್ನು ಗೆದ್ದಿದೆ.

ಇಂದು ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ: ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ಪ್ರೇಮದಾಸ ಸ್ಟೇಡಿಯಂ
IND vs PAK
Follow us on

ಏಷ್ಯಾಕಪ್ 2023 ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಈಗಾಗಲೇ ಸೂಪರ್-4 ಹಂತದ ಪಂದ್ಯಗಳು ಆರಂಭವಾಗಿದ್ದು, ಇಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗರಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಸೂಪರ್-4ನಲ್ಲಿ ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಬಾಬರ್ ಪಡೆ ಮತ್ತೊಂದು ಜಯದತ್ತ ಕಣ್ಣಿಟ್ಟಿದ್ದರೆ, ಇತ್ತ ಟೀಮ್ ಇಂಡಿಯಾ ಮೊದಲ ಗೆಲುವಿನ ಆಸೆಯಲ್ಲಿದೆ.

ಹಿಂದಿನ ಮುಖಾಮುಖಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿತ್ತು. ಭಾರತದ ಟಾಪ್ ಆರ್ಡರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ನಾಯಕ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಬೇಗೆನ ಔಟಾಗಿ ಪೆವಿಲಿಯನ್ ಸೇರಿದ್ದರು. ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಮಾತ್ರ ತಂಡಕ್ಕೆ ಆಸರೆಯಾಗಿದ್ದರು. ಇಂದಿನ ಪಂದ್ಯದಲ್ಲಿ ಭಾರತ ತಪ್ಪುಗಳನ್ನು ಸರಿಪಡಿಸಿ ಉತ್ತಮ ಆಟ ಆಡಬೇಕಿದೆ.

ಭಾರತಕ್ಕೆ ಶುಭಸುದ್ದಿ ಎಂದರೆ ಕೆಎಲ್ ರಾಹುಲ್ ತಂಡ ಸೇರಿಕೊಂಡಿರುವುದು. ಆದರೆ, ಕೆಎಲ್ ಆಡುವ ಕಾರಣ ಟೀಮ್ ಇಂಡಿಯಾಕ್ಕೆ ಪ್ಲೇಯಿಂಗ್ ಇಲೆವೆನ್​ನದ್ದು ದೊಡ್ಡ ಚಿಂತೆಯಾಗಿದೆ. ಆರಂಭದ ಎರಡು ಪಂದ್ಯದಲ್ಲಿ ರಾಹುಲ್ ಸ್ಥಾನ ತುಂಬಿದ್ದ ಇಶಾನ್ ಕಿಶನ್ ಪಾಕ್ ವಿರುದ್ಧ ಬೊಂಬಾಟ್ ಪ್ರದರ್ಶನ ತೋರಿದ್ದರು. ಅತ್ತ ಶುಭ್​ಮನ್ ಗಿಲ್ ಕೂಡ ನೇಪಳಾ ವಿರುದ್ಧ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ರಾಹುಲ್​ಗೆ ಯಾರು ಜಾಗ ಮಾಡಿಕೊಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇನ್ನು ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ಜಸ್​ಪ್ರಿತ್ ಬುಮ್ರಾ ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ
ಟೀಮ್ ಇಂಡಿಯಾದಲ್ಲಿ 1 ಬದಲಾವಣೆ ಖಚಿತ: ಹೀಗಿರಲಿದೆ ಪ್ಲೇಯಿಂಗ್ 11
ಭಾರತದ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ 11 ಘೋಷಿಸಿದ ಪಾಕಿಸ್ತಾನ್
ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ಡೇವಿಡ್ ವಾರ್ನರ್
ಟೀಮ್ ಇಂಡಿಯಾಗೆ ಇಬ್ಬರು ಆಟಗಾರರ ಎಂಟ್ರಿ: ಆಡುವ ಬಳಗದಲ್ಲಿ ಬದಲಾವಣೆ ಖಚಿತ

ಪ್ರೇಮದಾಸ ಸ್ಟೇಡಿಯಂನಲ್ಲಿ ಕೊಹ್ಲಿಯೇ ಕಿಂಗ್: ಪಾಕ್​ ಬೌಲರ್​ಗಳಿಗೆ ನಡುಕ ಶುರು

ಇತ್ತ ಪಾಕ್ ಎಲ್ಲ ವಿಭಾಗಗಳಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ನಾಯಕ ಬಾಬರ್ ಅಜಮ್ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಫಖರ್ ಝಮಾನ್, ಇಮಾಮ್ ಉಲ್-ಹಖ್, ಮೊಹಮ್ಮದ್ ರಿಜ್ವಾನ್, ಇಫ್ತಿಖರ್ ಅಹ್ಮದ್ ಕೂಡ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬೌಲಿಂಗ್​ನಲ್ಲಿ ಭಾರತಕ್ಕೆ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ನಸೀಂ ಶಾ ಅವರದ್ದೇ ಚಿಂತೆ. ಪ್ರತಿ ಪಂದ್ಯದಲ್ಲಿ ಈ ತ್ರಿಮೂರ್ತಿಗಳು ಮಾರಕವಾಗಿದ್ದಾರೆ.

ಭಾರತ-ಪಾಕ್ ಪಂದ್ಯ ನಡೆಯಲಿರುವ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಮತ್ತೊಂದೆಡೆ, ವೇಗದ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಯಶಸ್ಸು ಸಾಧಿಸುತ್ತಾರೆ. ಪಂದ್ಯದ ಮಧ್ಯದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಸಹಾಯ ಮಾಡಲಿದೆಯಷ್ಟೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ, ತನ್ನ ಕೊನೆಯ 8 ಪಂದ್ಯಗಳಲ್ಲಿ 7 ಅನ್ನು ಗೆದ್ದಿದೆ. ಪಾಕಿಸ್ತಾನ ಈ ಮೈದಾನದಲ್ಲಿ ತನ್ನ ಕೊನೆಯ 4 ಏಕದಿನದಲ್ಲಿ 2 ಗೆದ್ದಿದೆ ಮತ್ತು 2 ರಲ್ಲಿ ಸೋತಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

ಪಾಕಿಸ್ತಾನ್ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಖರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಂ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ