ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಸತತ ಎರಡು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಜಯದ ಕನಸಿನಲ್ಲಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಶಾಕ್ (India vs South Africa) ನೀಡಿತು. ಗೆಲ್ಲುವ ವಿಶ್ವಾಸದೊಂದಿಗೆ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ಆರಂಭದಲ್ಲೇ ಪ್ರಮುಖ ಸ್ಟಾರ್ ಬ್ಯಾಟರ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸೂರ್ಯಕುಮಾರ್ ಯಾದವ್ (Suryakumar Yadav) ಕ್ರೀಸ್ ಕಚ್ಚಿನಿಂತು ಅರ್ಧಶತಕ ಸಿಡಿಸಿದ ಪರಿಣಾಮ ತಂಡದ ಮೊತ್ತ 100ರ ಗಡಿ ದಾಟಿತು. ಸೂರ್ಯ ಬಿಟ್ಟರೆ ಉಳಿದ ಯಾವ ಬ್ಯಾಟರ್ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ಈ ಸೋಲಿನ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಕೂಡ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಮುಂಬರುವ ಪಂದ್ಯಗಳು ರೋಹಿತ್ ಪಡೆಗೆ ಮುಖ್ಯವಾಗಿದೆ. ಸೆಮಿ ಫೈನಲ್ಗೆ ಕಠಿಣ ಪೈಪೋಟಿ ಇರುವ ಕಾರಣ ರನ್ರೇಟ್ ಹಾಗೂ ಗೆಲುವಿನ ಅಂಕ ಟೀಮ್ ಇಂಡಿಯಾ ಮೇಲೆ ಪರಿಣಾಮ ಬೇಳಲಿದೆ.
ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದು ನವೆಂಬರ್ 2 ರಂದು ಅಡಿಲೇಡ್ನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೆಣೆಸಾಟ ನಡೆಸಲಿದೆ. ಇದು ನವೆಂಬರ್ 6 ರಂದು ಆಯೋಜಿಸಲಾಗಿದೆ. ಈ ಎರಡೂ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ.
ಅಡಿಲೇಡ್ ತಲುಪಿದ ಭಾರತ:
ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತ ಬಾಂಗ್ಲಾದೇಶ ವಿರುದ್ಧದ ಕದನಕ್ಕೆ ಅಡಿಲೇಡ್ಗೆ ಬಂದಿಳಿದಿದೆ. ಇದರ ಫೋಟೋವನ್ನು ಯುಜ್ವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಹಾಗೂ ಅರ್ಶ್ದೀಪ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದೀರ್ಘ ಪ್ರಯಾಣದ ಬಳಿಕ ಇಂದು ಟೀಮ್ ಇಂಡಿಯಾ ಆಟಗಾರರು ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಬ್ಯಾಟಿಂಗ್ ಪ್ರಿಯರ ನೆಚ್ಚಿನ ಪಿಚ್ ಆಗಿರುವ ಅಡಿಲೇಡ್ನಲ್ಲಿ ಮಂಗಳವಾರ ಇಡೀ ದಿನ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತಕ್ಕೆ ಸೋಲು:
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ಗೆ ಬೆಲೆ ತೆತ್ತ ಭಾರತ ಸೋಲು ಕಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲುಂಗಿ ಎನ್ಗಿಡಿ (4 ವಿಕೆಟ್) ಆರಂಭದಲ್ಲೆ ಆಘಾತ ನೀಡಿದರು. ಕೆ.ಎಲ್. ರಾಹುಲ್ (9), ರೋಹಿತ್ ಶರ್ಮಾ (15), ವಿರಾಟ್ ಕೊಹ್ಲಿ (12), ಹಾರ್ದಿಕ್ ಪಾಂಡ್ಯ (0) ಹಾಗೂ ದೀಪಕ್ ಹೂಡ (0) ಅವರ ವಿಕೆಟ್‌ಗಳನ್ನು 50 ರನ್ಗು ಮುನ್ನವೇ ಕಳೆದುಕೊಂಡಿತು. ಆದರೆ ಮತ್ತೊಮ್ಮೆ ದಿಟ್ಟ ಆಟವಾಡಿದ ಸೂರ್ಯಕುಮಾರ್ ಯಾದವ್ (68 ರನ್, 40ಎಸೆತ, 6 ಫೋರ್, 3 ಸಿಕ್ಸರ್) ಅವರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 133 ರನ್ ಗಳಿಸಿತು.
ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾಗೆ ಅರ್ಷದೀಪ್ ಸಿಂಗ್ ಆರಂಭದಲ್ಲೇ ಎರಡು ವಿಕೆಟ್ ಪಡೆದು ಆಘಾತ ನೀಡಿದರು. ಕ್ವಿಂಟಾನ್ ಡಿ ಕಾಕ್ 1 ಮತ್ತು ರಿಲೀ ರೋಸ್ಸೋ ಸೊನ್ನೆ ಸುತ್ತಿ ಔಟಾದರು. ಬಳಿಕ ಟೆಂಬಾ ಬಾವುವಾ 10 ರನ್ ಗಳಿಸಿದ್ದಾಗ ಶಮಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತಕ್ಕೂ ಗೆಲುವಿನತ್ತ ಸಾಗುವ ಅವಕಾಶ ಇತ್ತು. ಆದರೆ, ಫೀಲ್ಡಿಂಗ್‌ನಲ್ಲಿ ನಡೆದ ಲೋಪಗಳು ದುಬಾರಿಯಾದವು. ಆ್ಯಡಂ ಮರ್ಕ್ರಮ್ ಮತ್ತು ಡೇವಿಡ್ ಮಿಲ್ಲರ್ ಕ್ರಮವಾಗಿ 52 ಹಾಗೂ 59 ರನ್ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿ ಜಯದ ದಡಕ್ಕೆ ಕೊಂಡೊಯ್ದರು. ಅಂತಿಮವಾಗಿ ಆಫ್ರಿಕಾ 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 137 ರನ್ ಗಳಿಸಿ ಜಯ ಸಾಧಿಸಿತು.
Published On - 12:41 pm, Mon, 31 October 22