Mohammed Siraj: ಸಿರಾಜ್ ಬೆಂಕಿ ಬೌಲಿಂಗ್: ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್

| Updated By: ಝಾಹಿರ್ ಯೂಸುಫ್

Updated on: Sep 14, 2022 | 10:59 AM

Mohammed Siraj: ಸಿರಾಜ್ ಅವರ ಮುಂದಿನ ಬಲಿಪಶು ಲೂಯಿಸ್ ಗ್ರೆಗೊರಿ. ಉತ್ತಮ ಫಾರ್ಮ್​ನಲ್ಲಿದ್ದ ಗ್ರೆಗೊರಿ ಅರ್ಧಶತಕ ಬಾರಿಸಿದ್ದರು. ಆದರೆ ಯುವ ವೇಗಿಯ ಬೌಲಿಂಗ್​ ಮುಂದೆ ರನ್​ಗಳಿಸಲು ಪರದಾಡಿದ್ದರು.

Mohammed Siraj: ಸಿರಾಜ್ ಬೆಂಕಿ ಬೌಲಿಂಗ್: ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್
Mohammed Siraj
Follow us on

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಘೋಷಣೆ ಬೆನ್ನಲ್ಲೇ ಇದೀಗ ಅವಕಾಶ ವಂಚಿತ ಭಾರತದ ವೇಗಿ ಭರ್ಜರಿ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದು ಕೂಡ ಇಂಗ್ಲೆಂಡ್​ ಪಿಚ್​​ನಲ್ಲಿ ಎಂಬುದು ವಿಶೇಷ. ಹೌದು, ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಷನ್-1 ರಲ್ಲಿ  ವಾರ್ವಿಕ್‌ಶೈರ್ ಪರ ಆಡುತ್ತಿರುವ ಸಿರಾಜ್ ಸೋಮರ್‌ಸೆಟ್ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಸಿರಾಜ್ ಅವರ ಮಾರಕ ದಾಳಿಗೆ ತತ್ತರಿಸಿದ ಸೋಮರ್ ಸೆಟ್​ ತಂಡವು  ಮೊದಲ ಇನಿಂಗ್ಸ್​ನಲ್ಲಿ ಕೇವಲ 219 ರನ್​ಗಳಿಗೆ ಆಲೌಟ್ ಆಯಿತು.

ಮೊದಲ ಪಂದ್ಯದಲ್ಲೇ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾ ವೇಗಿ 24 ಓವರ್ ಗಳಲ್ಲಿ 82 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು. ಈ ವೇಳೆ ಸಿರಾಜ್​ 6 ಮೇಡನ್ ಓವರ್​ಗಳನ್ನೂ ಎಸೆದಿರುವುದು ವಿಶೇಷ. ಈ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಇಮಾಮ್-ಉಲ್-ಹಕ್ ಅವರನ್ನು ಔಟ್ ಮಾಡುವ ಮೂಲಕ ಸಿರಾಜ್ ತಮ್ಮ ಮೊದಲ ವಿಕೆಟ್ ಪಡೆದರು. ಇದರ ನಂತರ ಜಾರ್ಜ್ ಬಾರ್ಟ್ಲೆಟ್ ಅನ್ನು ಬಲಿ ಪಡೆದರು. ಹಾಗೆಯೇ ಸಿರಾಜ್ ಅವರ ಮೂರನೇ ವಿಕೆಟ್‌ ಆಗಿ ಜೇಮ್ಸ್ ಶೂನ್ಯಕ್ಕೆ ಹೊರನಡೆದರು.

ಸಿರಾಜ್ ಅವರ ಮುಂದಿನ ಬಲಿಪಶು ಲೂಯಿಸ್ ಗ್ರೆಗೊರಿ. ಉತ್ತಮ ಫಾರ್ಮ್​ನಲ್ಲಿದ್ದ ಗ್ರೆಗೊರಿ ಅರ್ಧಶತಕ ಬಾರಿಸಿದ್ದರು. ಆದರೆ ಯುವ ವೇಗಿಯ ಬೌಲಿಂಗ್​ ಮುಂದೆ ರನ್​ಗಳಿಸಲು ಪರದಾಡಿದ್ದರು. ಅಂತಿಮವಾಗಿ ಸಿರಾಜ್​ಗೆ ವಿಕೆಟ್ ಒಪ್ಪಿಸುವ ಮೂಲಕ ಗ್ರೆಗೊರಿ ಹೊರನಡೆದರು. ಹಾಗೆಯೇ ಜೋಶ್ ಡೇವಿಗೆ ಪೆವಿಲಿಯನ್​ ಹಾದಿ ತೋರಿಸುವ ಮೂಲಕ ಸಿರಾಜ್ 5 ವಿಕೆಟ್​ಗಳನ್ನು ಕಬಳಿಸಿದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಸಿರಾಜ್ ಅವರ ಮಾರಕ ಬೌಲಿಂಗ್‌ನಿಂದಾಗಿ ಒಂದು ಹಂತದಲ್ಲಿ ಸೋಮರ್‌ಸೆಟ್ ಕೇವಲ 82 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆದರೆ, 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಸಾಜಿದ್‌ ಖಾನ್‌ ಬಿರುಸಿನ ಬ್ಯಾಟಿಂಗ್‌ ನಡೆಸಿ 64 ಎಸೆತಗಳಲ್ಲಿ 53 ರನ್‌ ಗಳಿಸಿದರು. ಇದರಿಂದ ತಂಡದ ಮೊತ್ತವು 219 ಕ್ಕೆ ಬಂದು ನಿಂತಿತು.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವಕಾಶ ವಂಚಿತರಾಗಿರುವ ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಬೌಲಿಂಗ್‌ನಿಂದ ಪ್ರಭಾವಿತರಾಗಿದ್ದಾರೆ. ಇದುವರೆಗೆ 13 ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್​ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಸೀಮಿತ ಓವರ್​ಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರು ಟೀಮ್ ಇಂಡಿಯಾ ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಕೌಂಟಿ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ ಮೊಹಮ್ಮದ್ ಸಿರಾಜ್.