ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದಾರಾ? ಇಂತಹದೊಂದು ಪ್ರಶ್ನೆ ಮೂಡಲು ಕಾರಣ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಆ ಒಂದು ಫೋಟೋ. ಅದು ಕೂಡ ಕೊನೆಯ ಟೆಸ್ಟ್ ಪಂದ್ಯದಲ್ಲಿ ಧರಿಸಿದ ಜೆರ್ಸಿ ಫೋಟೋ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪಿಂಕ್ ಬಣ್ಣದ ಬರಹಗಳಿರುವ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದರು. ಇದಾಗಿ ವಾರ ಕಳೆದರೂ, ಇದೀಗ ಜಡೇಜಾ ಆ ಜೆರ್ಸಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಫೋಟೋಗೆ ಯಾವುದೇ ಅಡಿಬರಹ ನೀಡಿಲ್ಲ ಎಂಬುದು ವಿಶೇಷ.
ಸಾಮಾನ್ಯವಾಗಿ ರವೀಂದ್ರ ಜಡೇಜಾ ತಮ್ಮ ಕಂಬ್ಯಾಕ್ ಸೂಚನೆ ನೀಡುವಾಗ ಜೆರ್ಸಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಹಿಂದೆ ಗಾಯದ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿರುವುದಾಗಿ ಜೆರ್ಸಿ ಫೋಟೋ ಹಂಚಿಕೊಳ್ಳುವಾಗ ಮೂಲಕ ತಿಳಿಸಿದ್ದರು. ಆದರೆ ಈ ಬಾರಿ ಜಡೇಜಾ ಯಾವುದೇ ಬರಹಗಳಿಲ್ಲದೆ, ಕೇವಲ ಟೆಸ್ಟ್ ಜೆರ್ಸಿ ಫೋಟೋ ಮಾತ್ರ ಹಂಚಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಮೇಜರ್ ಸರ್ಜರಿಯಾಗಲಿದೆ. ಈ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಕೂಡ ಇದ್ದಾರಾ ಎಂಬುದೇ ಈಗ ಪ್ರಶ್ನೆ.
ಏಕೆಂದರೆ 36 ವರ್ಷದ ರವೀಂದ್ರ ಜಡೇಜಾ ಈಗಾಗಲೇ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದೀಗ ಭಾರತ ಟೆಸ್ಟ್ ತಂಡದ ಹಿರಿಯ ಆಟಗಾರರಲ್ಲಿ ಜಡೇಜಾ ಕೂಡ ಒಬ್ಬರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ರವೀಂದ್ರ ಜಡೇಜಾ ಅವರನ್ನು ಪರಿಗಣಿಸುವ ಸಾಧ್ಯತೆಯಿಲ್ಲ.
ಈ ಬಗ್ಗೆ ಸ್ಪಷ್ಟ ಸೂಚನೆ ಸಿಕ್ಕ ಹಿನ್ನಲೆಯಲ್ಲಿ ರವೀಂದ್ರ ಜಡೇಜಾ ಕೊನೆಯ ಬಾರಿ ಧರಿಸಿದ ಟೆಸ್ಟ್ ಜೆರ್ಸಿಯ ಫೋಟೋವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜೂನ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಮ್ ಇಂಡಿಯಾದ ಹಿರಿಯ ಆಟಗಾರರು ಹೊರಬೀಳುವುದು ಖಚಿತ. ಈ ಹಿರಿಯರಲ್ಲಿ 36 ವರ್ಷದ ಜಡೇಜಾ ಕೂಡ ಇರಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2025: RCB ಆರಂಭಿಕರು ಯಾರೆಂದು ತಿಳಿಸಿದ ಕೋಚ್
ರವೀಂದ್ರ ಜಡೇಜಾ ಟೀಮ್ ಇಂಡಿಯಾ ಪರ 80 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 118 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 4 ಶತಕ ಹಾಗೂ 22 ಅರ್ಧಶತಕಗಳೊಂದಿಗೆ ಒಟ್ಟು 3370 ರನ್ ಕಲೆಹಾಕಿದ್ದಾರೆ. ಹಾಗೆಯೇ 150 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 323 ವಿಕೆಟ್ ಕಬಳಿಸಿ ಮಿಂಚಿದ್ದಾರೆ.