16 ವರ್ಷಗಳ ಬರವನ್ನು ಈ ಬಾರಿಯಾದರೂ ನೀಗಿಸುತ್ತಾರಾ ವಿರಾಟ್ ಕೊಹ್ಲಿ?

|

Updated on: Jan 10, 2025 | 10:13 PM

Virat Kohli: ಕ್ರಿಕೆಟ್ ಲೋಕದಲ್ಲಿ ಶಕತಗಳ ಸರಮಾಲೆ ಕಟ್ಟಿರುವ ವಿರಾಟ್ ಕೊಹ್ಲಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನೂ ಶತಕ ಬಾರಿಸಿಲು ಸಾಧ್ಯವಾಗಿಲ್ಲ. ಈ ಐಸಿಸಿ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 13 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 529 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳು ಸೇರಿವೆ. ಆದರೆ ಈ ಟೂರ್ನಿಯಲ್ಲಿ ಶತಕ ಬಾರಿಸಲು ಕೊಹ್ಲಿಗೆ ಸಾಧ್ಯವಾಗಿಲ್ಲ.

16 ವರ್ಷಗಳ ಬರವನ್ನು ಈ ಬಾರಿಯಾದರೂ ನೀಗಿಸುತ್ತಾರಾ ವಿರಾಟ್ ಕೊಹ್ಲಿ?
ವಿರಾಟ್ ಕೊಹ್ಲಿ
Follow us on

ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ತಿಂಗಳು ಅಂದರೆ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಈ ಟೂರ್ನಿಗಾಗಿ ಟೀಂ ಇಂಡಿಯಾ ಕೂಡ ಸಕಲ ತಯಾರಿ ನಡೆಸುತ್ತಿದೆ. ಇದರ ಭಾಗವಾಗಿಯೇ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಕಾಲಿಡಲಿದೆ. ಈ ಐಸಿಸಿ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಇಬ್ಬರು ಸೂಪರ್​ಸ್ಟಾರ್​ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. ಇದಕ್ಕೆ ಕಾರಣವೂ ಇದ್ದು, ಈಗಾಗಲೇ ಟೆಸ್ಟ್ ಕ್ರಿಕೆಟ್​ನಿಂದ ದೂರ ಸರಿದವರಂತೆ ಕಾಣುತ್ತಿರುವ ಈ ಇಬ್ಬರು ಏಕದಿನ ಕ್ರಿಕೆಟ್​ನಲ್ಲಿ ಇನ್ನು ಕೆಲವು ವರ್ಷ ಸ್ಥಾನ ಪಡೆಯಬೇಕೆಂದರೆ ಈ ಟೂರ್ನಿಯಲ್ಲಿ ಮಿಂಚಲೇಬೇಕಿದೆ. ಅದರಲ್ಲೂ 16 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಕೊಹ್ಲಿ, ಈ ಟೂರ್ನಿಯಲ್ಲಿ ಅದೊಂದು ದಾಖಲೆ ಬರೆಯಲಾಗದೆ ಹೆಣಗಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯಾದರೂ ಕೊಹ್ಲಿ ಆ ಬರವನ್ನು ನೀಗಿಸಿಕೊಳ್ಳಲಿ ಎಂಬುದು ಎಲ್ಲರ ಆಶಯವಾಗಿದೆ.

ವಾಸ್ತವವಾಗಿ ವಿರಾಟ್ ಕೊಹ್ಲಿ ತಮ್ಮ 16 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಅದ್ಭುತ ದಾಖಲೆಗಳನ್ನು ಮಾಡಿದ್ದಾರೆ. ಒಂದೂವರೆ ದಶಕದ ವೃತ್ತಿಜೀವನದಲ್ಲಿ ಅವರು ಕ್ರಿಕೆಟ್ ಮೈದಾನದಲ್ಲಿ ಸರಣಿ ದಾಖಲೆಗಳನ್ನು ಮಾಡಿದ್ದಾರೆ. ಆದಾಗ್ಯೂ, ಅವರ ವೃತ್ತಿಜೀವನದಲ್ಲಿ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಈ ಐಸಿಸಿ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 13 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 529 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳು ಸೇರಿವೆ. ಆದರೆ ಈ ಟೂರ್ನಿಯಲ್ಲಿ ಶತಕ ಬಾರಿಸಲು ಕೊಹ್ಲಿಗೆ ಸಾಧ್ಯವಾಗಿಲ್ಲ.

4 ರನ್​ಗಳಿಂದ ಕನಸು ಭಗ್ನ

ಆದಾಗ್ಯೂ ವಿರಾಟ್ ಕೊಹ್ಲಿ ಒಮ್ಮೆ ಮಾತ್ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕದ ಸಮೀಪಕ್ಕೆ ಬಂದು ಶತಕ ವಂಚಿತರಾಗಿದ್ದಾರೆ. ಕೇವಲ ನಾಲ್ಕೇ ನಾಲ್ಕು ರನ್​ಗಳಿಂದ ಕೊಹ್ಲಿ ಬ್ಯಾಟ್ ಆಗಸ ನೋಡಲು ಸಾಧ್ಯವಾಗಲಿಲ್ಲ. 2017ರಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 41ನೇ ಓವರ್‌ನಲ್ಲಿ ಗುರಿ ಬೆನ್ನಟ್ಟಿತು. ತಂಡದ ಪರ ರೋಹಿತ್ ಶರ್ಮಾ 123 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ವಿರಾಟ್ 78 ಎಸೆತಗಳಲ್ಲಿ 96 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಬಾರಿಸುವ ಅವರ ಕನಸು ಕೇವಲ ನಾಲ್ಕು ರನ್​ಗಳಿಂದ ಭಗ್ನಗೊಂಡಿತು.

ಮತ್ತೊಮ್ಮೆ ಬಾಂಗ್ಲಾ ಎದುರು ಅಬ್ಬರಿಸ್ತಾರಾ ಕೊಹ್ಲಿ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ್ದು, ಸದ್ಯದಲ್ಲೇ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಮತ್ತೊಮ್ಮೆ ವಿರಾಟ್ ಕೆಂಗಣ್ಣಿಗೆ ಗುರಿಯಾಗಲಿದೆ ಎಂಬುದು ಗಮನಾರ್ಹ. ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತದ ಮೊದಲ ಪಂದ್ಯ ಬಾಂಗ್ಲಾದೇಶ ವಿರುದ್ಧ ದುಬೈನಲ್ಲಿ ಫೆಬ್ರವರಿ 20 ರಂದು ನಡೆಯಲಿದೆ. ಇದರ ನಂತರ, ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಫೆಬ್ರವರಿ 23 ರಂದು ಎದುರಿಸಲಿದೆ. ಕೊನೆಯದಾಗಿ ಭಾರತ ತಂಡ ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯಾವಳಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದ್ದು, ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ