Bangladesh vs India, 2nd ODI: ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ (Team India) ಇದೀಗ 2ನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಡಿಸೆಂಬರ್ 7 ರಂದು ನಡೆಯಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅಲಭ್ಯರಾಗುವ ಸಾಧ್ಯತೆಯಿದೆ. ಏಕೆಂದರೆ ಢಾಕಾದಲ್ಲಿ ನಡೆದ ಮೊದಲ ಪಂದ್ಯದ ವೇಳೆ ಶಾರ್ದೂಲ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಕೆಲ ಹೊತ್ತು ಮೈದಾನದಿಂದ ಹೊರಗುಳಿದಿದ್ದರು. ಇದಾದ ಬಳಿಕ ಮತ್ತೆ ಕಣಕ್ಕಿಳಿದರೂ ಸ್ನಾಯು ಸೆಳೆತದ ಸಮಸ್ಯೆ ಮರುಕಳಿಸಿತ್ತು. ಹೀಗಾಗಿ ಮುಂದಿನ ಪಂದ್ಯದ ವೇಳೆ ಶಾರ್ದೂಲ್ಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಯಸಿದೆ ಎಂದು ವರದಿಯಾಗಿದೆ.
ಶಾರ್ದೂಲ್ ಠಾಕೂರ್ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳಬೇಕಿದ್ದು, ಹೀಗಾಗಿ ಸಮಸ್ಯೆ ಬಿಗಡಾಯಿಸದಂತೆ ಎಚ್ಚರಿಕೆವಹಿಸಿಕೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ಸೂಚಿಸಿದೆ. ಸದ್ಯ ವೈದ್ಯಕೀಯ ತಂಡವು ಶಾರ್ದೂಲ್ ಠಾಕೂರ್ ಅವರ ಸ್ನಾಯು ಸಮಸ್ಯೆಯ ಬಗ್ಗೆ ನಿಗಾವಹಿಸಿದ್ದು, ಮಂಗಳವಾರದ ವೇಳೆಗೆ ಸಂಪೂರ್ಣ ಫಿಟ್ ಆಗಿ ಅಭ್ಯಾಸ ನಡೆಸಲು ಸಾಧ್ಯವಾಗದಿದ್ದರೆ 2ನೇ ಏಕದಿನ ಪಂದ್ಯದಿಂದ ಹೊರಗುಳಿಯುವುದು ಖಚಿತ ಎನ್ನಬಹುದು.
ಟೀಮ್ ಇಂಡಿಯಾಗೆ ಹಿನ್ನಡೆ:
ಒಂದು ವೇಳೆ ಶಾರ್ದೂಲ್ ಠಾಕೂರ್ 2ನೇ ಏಕದಿನ ಪಂದ್ಯದಿಂದ ಹೊರಗುಳಿದರೆ ಅದು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನುಂಟು ಮಾಡಬಹುದು. ಏಕೆಂದರೆ ಮೊದಲ ಏಕದಿನ ಪಂದ್ಯದಲ್ಲಿ 9 ಓವರ್ಗಳನ್ನು ಎಸೆದಿದ್ದ ಶಾರ್ದೂಲ್ ಠಾಕೂರ್ ನೀಡಿದ್ದು ಕೇವಲ 21 ರನ್ ಮಾತ್ರ. ಹೀಗಾಗಿ ನಿರ್ಣಾಯಕವಾಗಿರುವ 2ನೇ ಪಂದ್ಯದಲ್ಲಿ ಆಲ್ರೌಂಡರ್ ಅಲಭ್ಯತೆಯಿಂದ ಹಿನ್ನಡೆ ಉಂಟಾಗಬಹುದು.
ಬದಲಿ ಆಟಗಾರ ಯಾರು?
ಇನ್ನು ಶಾರ್ದೂಲ್ ಠಾಕೂರ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿದರೆ ಅವರ ಸ್ಥಾನದಲ್ಲಿ ಯುವ ವೇಗಿ ಉಮ್ರಾನ್ ಮಲಿಕ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಉಮ್ರಾನ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಬದಲಿ ಆಟಗಾರನಾಗಿ ಉಮ್ರಾನ್ ಮಲಿಕ್ಗೆ ಅವಕಾಶ ಸಿಗಬಹುದು.
ಭಾರತ ಏಕದಿನ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ) , ಶಿಖರ್ ಧವನ್ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ ( ವಿಕೆಟ್ ಕೀಪರ್ ) , ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್ , ದೀಪಕ್ ಚಾಹರ್ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್ , ಕುಲದೀಪ್ ಸೇನ್, ಇಶಾನ್ ಕಿಶನ್ , ರಾಹುಲ್ ತ್ರಿಪಾಠಿ , ರಜತ್ ಪಾಟಿದಾರ್ , ಉಮ್ರಾನ್ ಮಲಿಕ್.