ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯ (Ashes) ದ್ವಿತೀಯ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ (Australia) ಬಿಗಿ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ತಂಡವನ್ನು 325 ರನ್ಗಳಿಗೆ ಆಲೌಟ್ ಮಾಡಿ ತನ್ನ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಸೀಸ್ 2 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿದ್ದು, 221 ರನ್ಗಳ ಮುನ್ನಡೆಯಲ್ಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇರುವ ಕಾರಣ ಆಸ್ಟ್ರೇಲಿಯಾ ದೊಡ್ಡ ಮೊತ್ತದ ಮುನ್ನಡೆ ಸಾಧಿಸುವ ಪ್ಲಾನ್ನಲ್ಲಿದೆ. ಇತ್ತ ಇಂಗ್ಲೆಂಡ್ (England) ಮಾರಕ ದಾಳಿ ಸಂಘಟಿಸಬೇಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜಾ ಪ್ರಥಮ ವಿಕೆಟ್ಗೆ 73 ರನ್ಗಳ ಕಾಣಿಕೆ ನೀಡಿದರು. ಉಸ್ಮಾನ್ 70 ಎಸೆತಗಳಲ್ಲಿ 17 ರನ್ ಗಳಿಸಿದರೆ, ವಾರ್ನರ್ 88 ಎಸೆತಗಳಲ್ಲಿ 66 ರನ್ ಸಿಡಿಸಿ ಔಟಾದರು. ಬಳಿಕ ಮೂರನೇ ವಿಕೆಟ್ಗೆ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಈ ಜೋಡಿ 102 ರನ್ ಕಲೆಹಾಕಿತು. 93 ಎಸೆತಗಳಲ್ಲಿ 47 ರನ್ ಗಳಿಸಿ ಮಾರ್ನಸ್ ರಾಬಿನ್ಸನ್ಗೆ ವಿಕೆಟ್ ಒಪ್ಪಿಸಿದರು.
World Cup 2023: ‘ಭಾರತ- ಪಾಕ್ ಆಟಗಾರರು ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬೇಕು’; ಕ್ರಿಸ್ ಗೇಲ್ ಅಚ್ಚರಿ ಹೇಳಿಕೆ
ನಂತರ ಸ್ಮಿತ್ ಜೊತೆಯಾದ ಟ್ರಾವಿಡ್ ಹೆಡ್ ಬೊಂಬಾಟ್ ಆಟ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಹೆಡ್ ಕೇವಲ 73 ಎಸೆತಗಳಲ್ಲಿ 14 ಫೋರ್ ಸಹಿತ 77 ರನ್ ಚಚ್ಚಿದರು. ಈ ಮೂಲಕ ಸ್ಮಿತ್ ಜೊತೆ 118 ರನ್ಗಳನ್ನು ಪೇರಿಸಿದರು. ಕ್ಯಾಮ್ರೋನ್ ಗ್ರೀನ್ ಸೊನ್ನೆ ಸುತ್ತಿದರು. ಅಲೆಕ್ಸ್ ಕ್ಯಾರಿ 22 ರನ್, ಸ್ಟಾರ್ಕ್ 6, ಪ್ಯಾಟ್ ಕಮಿನ್ಸ್ ಅಜೇಯ 22 ರನ್ ಸಿಡಿಸಿದರು. ಇದರ ನಡುವೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮಿತ್ ಆಕರ್ಷಕ ಶತಕ ಸಿಡಿಸಿದರು. 184 ಎಸೆತಗಳಲ್ಲಿ 110 ರನ್ ಕಲೆಹಾಕಿದರು. ಅಂತಿಮವಾಗಿ ಆಸೀಸ್ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ 100.4 ಓವರ್ಗೆ 416 ರನ್ ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋಶ್ ಟಾಂಗ್, ರಾಬಿನ್ಸನ್ 3 ವಿಕೆಟ್ ಮತ್ತು ಜೋ ರೂಟ್ 2 ವಿಕೆಟ್ ಪಡೆದರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಮೊದಲ ವಿಕೆಟ್ಗೆ ಓಪನರ್ಗಳಾದ ಜ್ಯಾಕ್ ಕ್ರಾವ್ಲೆ ಹಾಗೂ ಡಕ್ಲೆಟ್ 91 ರನ್ಗಳ ಜೊತೆಯಾಟ ಆಡಿದರು. ಜ್ಯಾಕ್ 48 ಎಸೆತಗಳಲ್ಲಿ 48 ರನ್ ಗಳಿಸಿದರು. ಬಳಿಕ ಡಕ್ಲೆಟ್ ಜೊತೆಯಾದ ಓಲಿ ಪೊಪ್ 98 ರನ್ಗಳ ಕಾಣಿಕೆ ನೀಡಿದರು. ಪೊಪ್ 63 ಎಸೆತಗಳಲ್ಲಿ 42 ರನ್ ಗಳಿಸಿದರು. ಇದರ ಬೆನ್ನಲ್ಲೇ ಶತಕದ ಅಂಚಿನಲ್ಲಿದ್ದ ಡಕ್ಲೆಟ್ ಔಟ್ ಆದರು. 134 ಎಸೆತಗಳಲ್ಲಿ 98 ರನ್ ಗಳಿಸಿದ್ದಾಗ ಹ್ಯಾಜ್ಲೆವುಡ್ ಬೌಲಿಂಗ್ನಲ್ಲಿ ನಿರ್ಗಮಿಸಿದರು. ಈ ಬಾರಿ ಜೋ ರೂಟ್ (10) ಆಟ ನಡೆಯಲಿಲ್ಲ. ಹ್ಯಾರಿ ಬ್ರೂಕ್ ಅರ್ಧಶತಕ ಸಿಡಿಸಿದರು. ಬಳಿಕ ಬಂದ ಬ್ಯಾಟರ್ಗಳು ಯಾರು ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇಂಗ್ಲೆಂಡ್ 325 ರನ್ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಸ್ಟಾರ್ಕ್ 3, ಹ್ಯಾಜ್ಲೆವುಡ್ ಹಾಗೂ ಹೆಡ್ ತಲಾ 2 ವಿಕೆಟ್ ಪಡೆದರು.
91 ರನ್ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಡೇವಿಡ್ ವಾರ್ನರ್ 25 ರನ್ಗಳಿಗೆ ಔಟ್ ಆದರೆ, ಮಾರ್ನಸ್ ಲಾಬುಶೇನ್ ಆಟ 30 ರನ್ಗೆ ಅಂತ್ಯವಾಯಿತು. ಮೂರನೇ ದಿನದಾಟದ ಅಂತ್ಯಕ್ಕೆ ಆಸೀಸ್ 45.4 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿದೆ. ಉಸ್ಮಾನ್ ಖವಾಜಾ 58 ರನ್ ಗಳಿಸಿ ಹಾಗೂ ಸ್ಮಿತ್ 6 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 221 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ