- Kannada News Photo gallery Cricket photos Ashes 2023 Eng vs aus 2nd test australia star nathan lyon injured ruled out of Ashes 2023
Ashes 2023: ಸತತ 100 ಟೆಸ್ಟ್ ಪಂದ್ಯಗಳನಾಡಿದ್ದ ಸ್ಟಾರ್ ಪ್ಲೇಯರ್ ಆ್ಯಶಸ್ ಸರಣಿಯಿಂದ ಔಟ್!
Ashes 2023: ತಂಡದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಗಾಯಗೊಂಡಿದ್ದು, ಲಾರ್ಡ್ಸ್ ಟೆಸ್ಟ್ನಿಂದ ಹೊರಗುಳಿಯುವುದರೊಂದಿಗೆ ಇಡೀ ಆ್ಯಶಸ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
Updated on: Jul 01, 2023 | 8:06 AM

ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್ ಪಂದ್ಯ ರೊಚಕ ಘಟಕ್ಕೆ ಬಂದು ನಿಂತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು 416 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 325 ರನ್‌ಗಳಿಗೆ ಅಂತ್ಯಗೊಳಿಸಿದೆ.

ಹೀಗಾಗಿ ಆಂಗ್ಲರು ಇನ್ನಿಂಗ್ಸ್ ಮುನ್ನಡೆ ಪಡೆಯುವುದನ್ನು ತಪ್ಪಿಸಿದ ಆಸ್ಟ್ರೇಲಿಯಾ ತನ್ನ 2ನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿದೆ. ಈ ಮೂಲಕ 221 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಆದರೆ ಪಂದ್ಯದ ನಡುವೆ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.

ತಂಡದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಗಾಯಗೊಂಡಿದ್ದು, ಲಾರ್ಡ್ಸ್ ಟೆಸ್ಟ್ನಿಂದ ಹೊರಗುಳಿಯುವುದರೊಂದಿಗೆ ಇಡೀ ಆ್ಯಶಸ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದು ಆಸೀಸ್ ಪಾಳಯದ ಆತಂಕವನ್ನು ಹೆಚ್ಚಿಸಿದೆ.

ಆಸೀಸ್ ಆತಂಕಕ್ಕೆ ಕಾರಣವೂ ಇದ್ದು, ನಾಥನ್ ಲಿಯಾನ್ ಆಸ್ಟ್ರೇಲಿಯಾದ ಪ್ರಮುಖ ಮತ್ತು ಅನುಭವಿ ಸ್ಪಿನ್ನರ್. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಈ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಇನ್ನು 3 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ನಾಥನ್ ಅಲಭ್ಯತೆ ಆಸೀಸ್ಗೆ ಭಾರಿ ಹಿನ್ನಡೆಯನ್ನುಂಟು ಮಾಡಲಿದೆ.

ಇಂಜುರಿಯಿಂದಾಗಿ ಟೆಸ್ಟ್ನಿಂದ ಹೊರಬೀಳುವುದಕ್ಕೂ ಮುನ್ನ ಲಿಯಾನ್, ಆಸ್ಟ್ರೇಲಿಯಾ ಪರ ಸತತ 100 ನೇ ಟೆಸ್ಟ್ ಪಂದ್ಯವನ್ನು ಆಡಿದ ದಾಖಲೆಯನ್ನು ಬರೆದಿದ್ದರು. ಆದರೆ ದುರದೃಷ್ಟವಶಾತ್ ಈ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಲಿಯಾನ್ಗೆ ಶತಕದ ಟೆಸ್ಟ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಇನ್ನು ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಲಿಯಾನ್, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 281 ರನ್‌ಗಳ ಬೆನ್ನಟ್ಟುವ ಮೂಲಕ ಬ್ಯಾಟ್‌ನೊಂದಿಗೆ ನಿರ್ಣಾಯಕ ಪಾತ್ರವನ್ನು ವಹಿಸುವ ಮೊದಲು ಪ್ರತಿ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು.

ಇದೀಗ ನಾಥನ್ ಲಿಯಾನ್ ಆ್ಯಶಸ್ ಸರಣಿಯಿಂದ ಹೊರಬಿದ್ದಿರುವುದರಿಂದ ಅವರ ಸ್ಥಾನಕ್ಕೆ ಟಾಡ್ ಮರ್ಫಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿ ಆಡಿದ್ದ ಮರ್ಫಿ,ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದ ಸಾಧನೆ ಮಅಡಿದ್ದರು. ಅಂತಿಮವಾಗಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 14 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.




