ಲೀಡ್ಸ್ನ ಹೀಡಿಂಗ್ಲೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (ENG vs AUS) ನಡುವಣ ಆ್ಯಶಸ್ ಸರಣಿಯ (Ashes Series) ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾಂಗರೂ ಪಡೆ 224 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಂಗ್ಲರಿಗೆ ಗೆಲ್ಲಲು 251 ರನ್ಗಳ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ. ಸ್ಟೋಕ್ಸ್ (Ben Stokes) ಪಡೆಯ ಗೆಲುವಿಗೆ ಇನ್ನು 224 ರನ್ಗಳ ಅವಶ್ಯಕತೆಯಿದ್ದು, ಎರಡು ದಿನಗಳ ಆಟ ಬಾಕಿಯಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಶುರುಮಾಡಿದ ಆಸ್ಟ್ರೇಲಿಯಾ 100 ರನ್ಗು ಮೊದಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ತಂಡದ ಪರ ಮಿಚೆಲ್ ಮಾರ್ಶ್ ಏಕಾಂಗಿ ಹೋರಾಟ ನಡೆಸಿ ಶತಕ ಸಿಡಿಸಿ ಮಿಂಚಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ಮಾರ್ಶ್ ರನ್ ಕಲೆಹಾಕಿದರು. 118 ಎಸೆತಗಳಲ್ಲಿ 17 ಫೋರ್, 4 ಸಿಕ್ಸರ್ನೊಂದಿಗೆ 118 ರನ್ ಚಚ್ಚಿದರು. ಇವರು ಬಿಟ್ಟರೆ ಟ್ರಾವಿಸ್ ಹೆಡ್ 39 ರನ್ ಗಳಿಸಿದ್ದೇ ಹೆಚ್ಚು. ಆಸೀಸ್ 60.4 ಓವರ್ಗಳಲ್ಲಿ 263 ರನ್ಗಳಿಗೆ ಆಲೌಟ್ ಆಯಿತು. ಮಾರ್ಕ್ ವುಡ್ 5 ಹಾಗೂ ಕ್ರಿಸ್ ವೋಕ್ಸ್ 3 ವಿಕೆಟ್ ಕಿತ್ತರು.
IND vs WI: ಯುವ ಆಟಗಾರರಿಗೆ ಬ್ಯಾಟ್, ಶೂಸ್ ಗಿಫ್ಟ್ ನೀಡಿದ ಮೊಹಮ್ಮದ್ ಸಿರಾಜ್
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡದ ಬ್ಯಾಟರ್ಗಳು ಕೂಡ ನಿತ್ತು ಆಡಲಿಲ್ಲ. ತಂಡದ ಮೊತ್ತ 87 ಆಗುವ ಹೊತ್ತಿಗೆ 5 ವಿಕೆಟ್ ಪತನಗೊಂಡವು. ನಾಯಕ ಬೆನ್ ಸ್ಟೋಕ್ಸ್ 108 ಎಸೆತಗಳಲ್ಲಿ 80 ರನ್ ಗಳಿಸಿ ತಂಡದ ಮಾನ ಉಳಿಸಿದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಆಂಗ್ಲರು 52.3 ಓವರ್ನಲ್ಲಿ 237 ರನ್ಗಳಿಗೆ ಆಲೌಟ್ ಆದರು. ಕಮಿನ್ಸ್ 6 ವಿಕೆಟ್ ಕಿತ್ತು ಮಿಂಚಿದರು. 26 ರನ್ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಪುನಃ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಡೇವಿಡ್ ವಾರ್ನರ್ 1, ಸ್ಟೀವ್ ಸ್ಮಿತ್ 2, ಉಸ್ಮಾನ್ ಖ್ವಾಜಾ 43 ಹಾಗೂ ಮಾರ್ನಸ್ ಲಾಬುಶೇನ್ 33 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಮಿಚೆಲ್ ಮಾರ್ಶ್ ಈ ಭಾರಿ 28 ರನ್ಗೆ ಸುಸ್ತಾದರು. ಟ್ರಾವಿಸ್ ಹೆಡ್ ಬಿಟ್ಟರೆ ಉಳಿದ ಬ್ಯಾಟರ್ಗಳ ಖಾತೆಯಿಂದ ರನ್ ಬರಲಿಲ್ಲ. ಹೆಡ್ 77 ರನ್ ಗಳಿಸಿ ನೆರವಾದರು. ಆಸ್ಟ್ರೇಲಿಯಾ 67.1 ಓವರ್ಗಳಲ್ಲಿ 224 ರನ್ಗೆ ಆಲೌಟ್ ಆಯಿತು. ಬ್ರಾಡ್ ಹಾಗೂ ವೋಕ್ಸ್ ತಲಾ 3 ವಿಕೆಟ್ ಪಡೆದರು. ಇತ್ತ 251 ರನ್ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಕಲೆಹಾಕಿದೆ. ಜ್ಯಾಕ್ ಕ್ರಾವ್ಲೆ (9) ಹಾಗೂ ಬೆನ್ ಡಕ್ಲೆಟ್ (18) ಕ್ರೀಸ್ನಲ್ಲಿದ್ದಾರೆ. ಇಂಗ್ಲೆಂಡ್ ಜಯಕ್ಕೆ 224 ರನ್ಗಳು ಬೇಕಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ