ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್ ವೈಫಲ್ಯ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತದ ಬಹುತೇಕ ಬ್ಯಾಟರ್ಗಳು ವಿಫಲರಾಗಿದ್ದರು. ಅದರಲ್ಲೂ ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟ್ಸ್‌ಮನ್ ಒಂದೇ ರೀತಿ ಔಟಾಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಮತ್ತೊಂದೆಡೆ ರೋಹಿತ್ ಶರ್ಮಾ ಬ್ಯಾಟ್ನಿಂದ 5 ಇನಿಂಗ್ಸ್ಗಳಿಂದ ಮೂಡಿಬಂದ ಒಟ್ಟು ಸ್ಕೋರ್ ಕೇವಲ 31 ರನ್ಗಳು ಮಾತ್ರ. ಹೀಗಾಗಿಯೇ ಇದೀಗ ಟೀಮ್ ಇಂಡಿಯಾಗೆ ಬ್ಯಾಟಿಂಗ್ ಕೋಚ್ ಅನ್ನು ನೇಮಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಗೌತಮ್ ಗಂಭೀರ್ ನೇತೃತ್ವದ ಸಿಬ್ಬಂದಿ ವರ್ಗದಲ್ಲಿ ಬ್ಯಾಟಿಂಗ್ ಕೋಚ್ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ ಉತ್ತಮ ಬ್ಯಾಟರ್ಗಳಾಗಿ ಗುರುತಿಸಿಕೊಂಡಿದ್ದ ಗಂಭೀರ್ ಹಾಗೂ ಅಭಿಷೇಕ್ ನಾಯರ್ ಸಿಬ್ಬಂದಿ ವರ್ಗದಲ್ಲಿದ್ದು. ಈ ಹಿಂದೆ ಕೆಕೆಆರ್ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದು ಅಭಿಷೇಕ್ ನಾಯರ್.
ಹೀಗಾಗಿಯೇ ಟೀಮ್ ಇಂಡಿಐಆ ಸಹಾಯಕ ಕೋಚ್ ಹುದ್ದೆಯೊಂದಿಗೆ ಅಭಿಷೇಕ್ ನಾಯರ್ ಅವರನ್ನೇ ಬ್ಯಾಟಿಂಗ್ ಕೋಚ್ ಸ್ಥಾನದಲ್ಲೂ ಗಂಭೀರ್ ಮುಂದುವರೆಸಿದ್ದರು. ಆದರೀಗ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳ ಕಳಪೆ ಪ್ರದರ್ಶನವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ.
ಭಾರತ ತಂಡದ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಜನವರಿ 11 ರಂದು ಮುಂಬೈನಲ್ಲಿ ಬಿಸಿಸಿಐ ಪರಿಶೀಲನಾ ಸಭೆ ನಡೆಸಿತ್ತು. ಈ ಸಭೆಯಲ್ಲಿ ನಾಯಕ ರೋಹಿತ್ ಶರ್ಮಾ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಉಪಸ್ಥಿತರಿದ್ದರು.
ಈ ವೇಳೆ ಟೀಮ್ ಇಂಡಿಯಾ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ ಎಂದು ಕ್ರಿಕ್ಬಝ್ ವರದಿ ಹೇಳಿದೆ. ಅಲ್ಲದೆ ಬ್ಯಾಟಿಂಗ್ ಸುಧಾರಿಸಲು ಹೊಸ ಸಿಬ್ಬಂದಿಯ ನೇಮಕ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಇದಕ್ಕಾಗಿ ಬ್ಯಾಟಿಂಗ್ ಕೋಚ್ ಅನ್ನು ನೇಮಕ ಮಾಡಬೇಕೆಂಬ ತೀರ್ಮಾನಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಬಂದಿದೆ.
ಈ ವರದಿಯ ಪ್ರಕಾರ, ಬ್ಯಾಟಿಂಗ್ ಕೋಚ್ ಪಾತ್ರಕ್ಕಾಗಿ ದೇಶೀಯ ಕ್ರಿಕೆಟ್‌ನ ಅನುಭವಿಗಳನ್ನು ನೋಡಲಾಗುತ್ತಿದೆ. ಅತ್ತ ಗೌತಮ್ ಗಂಭೀರ್ ಸ್ವತಃ ಶ್ರೇಷ್ಠ ಬ್ಯಾಟ್ಸ್‌ಮನ್. ಆದರೆ ಆಸ್ಟ್ರೇಲಿಯಾ ಪ್ರವಾಸದ ನಂತರ ಅವರ ಕಾರ್ಯ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿವೆ. ಇದೀಗ ಗಂಭೀರ್ ಬಯಸದಿದ್ದರೂ, ಟೀಮ್ ಇಂಡಿಯಾಗೆ ಹೊಸ ಬ್ಯಾಟಿಂಗ್ ಕೋಚ್ ಅನ್ನು ನೇಮಿಸಲು ಬಿಸಿಸಿಐ ಮುಂದಾಗಿದೆ.
ಹೀಗಾಗಿಯೇ ಬಿಸಿಸಿಐ ಗೌತಮ್ ಗಂಭೀರ್ ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಪರಿಶೀಲನಾ ಸಭೆಯಲ್ಲಿ ಅಸ್ತಿತ್ವದಲ್ಲಿರುವ ಗಂಭೀರ್ ನೇಮಿಸಿದ ಸಹಾಯಕ ಸಿಬ್ಬಂದಿಯ ಬಗ್ಗೆ ಕೂಡ ಚರ್ಚೆ ನಡೆದಿದೆ.
ಹೀಗಾಗಿ ಮುಂಬರುವ ಟೂರ್ನಿಯಲ್ಲಿನ ಭಾರತ ತಂಡದ ಪ್ರದರ್ಶನ ಕೆಲ ಸಿಬ್ಬಂದಿಗಳ ಪಾಲಿಗೆ ನಿರ್ಣಾಯಕ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿಫಲವಾದರೆ, ಭಾರತ ತಂಡದ ಕೋಚಿಂಗ್ ಸಿಬ್ಬಂದಿಗಳ ಬದಲಾವಣೆಯಾಗಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್
ಇಲ್ಲಿ ಸಹಾಯಕ ತರಬೇತುದಾರರಾದ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೆಸ್ಕೇಟ್ ಅವರನ್ನು ಬದಲಿಸುವ ಸಾಧ್ಯತೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳಲ್ಲಿ ಮಹತ್ವದ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.