ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಕ್ಕಾಗಿ ಬಿಸಿಸಿಐ (BCCI) ಸಿದ್ಧತೆ ಶುರು ಮಾಡಿದೆ. ಈಗಾಗಲೇ ಮಿನಿ ಹರಾಜು ಮುಗಿದಿದ್ದು, ಇದೀಗ ಐಪಿಎಲ್ ಶೀರ್ಫಿಕೆ ಪ್ರಾಯೋಜಕರ ಹುಡುಕಾಟಕ್ಕೆ ಮುಂದಾಗಿದೆ. ಆದರೆ ಈ ಪ್ರಾಯೋಜಕತ್ವದಲ್ಲಿ ಚೀನಾ ಕಂಪೆನಿಗಳಿಗೆ ಅವಕಾಶ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಟೆಂಡರ್ ಕರೆದಿದ್ದು, ಈ ಟೆಂಡರ್ ಪ್ರತಿಯಲ್ಲಿ ಭಾರತದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿರದ ದೇಶಗಳಿಗೆ ಪ್ರಾಮುಖ್ಯತೆ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅದರಂತೆ ಈ ಬಾರಿ ಕೂಡ ಐಪಿಎಲ್ ಪ್ರಾಯೋಜಕತ್ವದಿಂದ ಚೀನಾ ಬ್ರಾಂಡ್ಗಳನ್ನು ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ.
ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಮೂಲ ಬೆಲೆ ವರ್ಷಕ್ಕೆ 360 ಕೋಟಿ ರೂ. ಅಂದರೆ ಟೆಂಡರ್ ಪ್ರಕ್ರಿಯೆ 360 ಕೋಟಿ ರೂ.ನಿಂದ ಶುರುವಾಗಲಿದೆ. ಇದರಲ್ಲಿ ಅತೀ ಹೆಚ್ಚು ಬಿಡ್ ಸಲ್ಲಿಸಿದ ಕಂಪೆನಿಗಳಿಗೆ ಪ್ರಾಯೋಜಕತ್ವವನ್ನು ನೀಡಲಾಗುತ್ತದೆ. ಹೀಗಾಗಿ ಶೀರ್ಷಿಕೆ ಪ್ರಾಯೋಜಕತ್ವವು ವಾರ್ಷಿಕ 500 ಕೋಟಿ ರೂ. ದಾಟುವ ನಿರೀಕ್ಷಿಸಿದೆ.
ಈ ಹಿಂದೆ ಚೀನಾದ ಫೋನ್ ಕಂಪನಿ ವಿವೊ ಐಪಿಎಲ್‌ನ ಪ್ರಾಯೋಜಕರಾಗಿದ್ದರು. ಆದರೆ 2020 ರಲ್ಲಿ ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಾಗ, ವಿವೊ ಕಂಪೆನಿಯ ಪ್ರಾಯೋಜಕತ್ವವನ್ನು ಬಿಸಿಸಿಐ ಕೈ ಬಿಟ್ಟಿತ್ತು. ಅಷ್ಟೇ ಅಲ್ಲದೆ ಕಳೆದ ಸೀಸನ್ನಲ್ಲಿ ಟಾಟಾ ಕಂಪೆನಿಯು ಪ್ರಾಯೋಜಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕಾಟದಲ್ಲಿದ್ದು, ಈ ಬಾರಿ ಯಾರು ಅತೀ ಹೆಚ್ಚು ಬಿಡ್ ಸಲ್ಲಿಸಲಿದ್ದಾರೆ ಕಾದು ನೋಡಬೇಕಿದೆ.
ಬಿಸಿಸಿಐ ತನ್ನ ಟೆಂಡರ್ ಪ್ರತಿಯಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಯಾವುದೇ ದೇಶದೊಂದಿಗೆ ಬಿಡ್‌ದಾರರು ಯಾವುದೇ ಸಂಪರ್ಕವನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ. ಹಾಗೆಯೇ ಅಂತಹ ಬಿಡ್‌ದಾರರು ಮುಂದೆ ಬಂದರೆ, ಅವರು ತಮ್ಮ ಷೇರುದಾರರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಂಡಳಿಗೆ ನೀಡಬೇಕು. ಆ ಬಳಿಕವಷ್ಟೇ ಬಿಡ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Virat Kohli: ಭರ್ಜರಿ ದಾಖಲೆ ಬರೆದ ಕಿಂಗ್ ಕೊಹ್ಲಿ
ಅಷ್ಟೇ ಅಲ್ಲದೆ, ಫ್ಯಾಂಟಸಿ ಗೇಮ್ಸ್, ಕ್ರಿಪ್ಟೋಕರೆನ್ಸಿ ಮತ್ತು ಬೆಟ್ಟಿಂಗ್‌ಗೆ ಸಂಬಂಧಿಸಿದ ಕಂಪನಿಗಳನ್ನೂ ಮಂಡಳಿ ನಿಷೇಧಿಸಿದೆ. ಹಾಗೆಯೇ ಕ್ರೀಡೆಗೆ ಸಂಬಂಧಿಸಿದ ಬಟ್ಟೆಗಳ ತಯಾರಿಕೆಯಲ್ಲಿ ಸಕ್ರಿಯವಾಗಿರುವ ಕಂಪನಿಗಳಿಗೆ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಡ್ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇನ್ನು ಈ ಬಾರಿ ನಡೆಯುತ್ತಿರುವ ಬಿಡ್ಡಿಂಗ್ ಮೂಲಕ 5 ವರ್ಷಗಳವರೆಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ನೀಡಲಾಗುತ್ತದೆ. ಅಂದರೆ, ಈ ಒಪ್ಪಂದವು IPL 2024 ರಿಂದ IPL 2029 ರವರೆಗೆ ಇರಲಿದೆ.