ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ರಣರೋಚಕ ಹೋರಾಟ ಕಂಡು ಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೆಂಬಾ ಬವುಮಾ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರೋಹಿತ್ ಶರ್ಮಾ (5) ಹಾಗೂ ಯಶಸ್ವಿ ಜೈಸ್ವಾಲ್ (17) ಬೇಗನೆ ಔಟಾದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ (2) ಕೂಡ ಬಂದ ವೇಗದಲ್ಲೇ ಹಿಂತಿರುಗಿದ್ದರು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ (31) ಹಾಗೂ ವಿರಾಟ್ ಕೊಹ್ಲಿ (38) ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇದಾಗ್ಯೂ ಕಗಿಸೊ ರಬಾಡ ಹಾಗೂ ನಾಂಡ್ರೆ ಬರ್ಗರ್ ಅವರ ಕರಾರುವಾಕ್ ದಾಳಿಯಿಂದಾಗಿ ಟೀಮ್ ಇಂಡಿಯಾ 107 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ ಕೆಎಲ್ ರಾಹುಲ್ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿದರು.
ಸೌತ್ ಆಫ್ರಿಕಾ ವೇಗಿಗಳಿಗೆ ಭರ್ಜರಿ ಬ್ಯಾಟಿಂಗ್ ಮೂಲಕವೇ ಪ್ರತ್ಯುತ್ತರ ನೀಡಿದ ರಾಹುಲ್ ರನ್ಗಳಿಸುತ್ತಾ ಸಾಗಿದರು. ಅತ್ತ ಆರಂಭಿಕ ಮೇಲುಗೈ ಸಾಧಿಸಿದ್ದ ಬೌಲರ್ಗಳು ರಾಹುಲ್ ಅವರ ಅತ್ಯುತ್ತಮ ಬ್ಯಾಟಿಂಗ್ನಿಂದ ಹೈರಾಣರಾಗಿದ್ದರು.
ಅದರಲ್ಲೂ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಎಸೆತಗಳಲ್ಲಿ ರಾಹುಲ್ ಸಿಕ್ಸ್-ಫೋರ್ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದರು. ಮೊದಲೇ ವಿಕೆಟ್ ಸಿಗದೇ ಕಂಗೆಟ್ಟಿದ್ದ ಯಾನ್ಸೆನ್ ಇದರಿಂದ ಕುಪಿತಗೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಎಲ್ ರಾಹುಲ್ ಅವರನ್ನು ಕೆಣಕಲು ಪ್ರಾರಂಭಿಸಿದ್ದಾರೆ.
ಆದರೆ ಮಾರ್ಕೊ ಯಾನ್ಸೆನ್ ಹಲವು ಬಾರಿ ನಾಲಿಗೆ ಹರಿಬಿಟ್ಟರೂ ಕೆಎಲ್ ರಾಹುಲ್ ಶಾಂತವಾಗಿಯೇ ಇದ್ದರು. ಅದರಲ್ಲೊಮ್ಮೆ ನೇರವಾಗಿ ನೋಡಿ ಸ್ಲೆಡ್ಜ್ ಮಾಡಿದರೂ ರಾಹುಲ್ ನಗುವಿನೊಂದಿಗೆ ಪ್ರತಿಕ್ರಿಯಿಸಿದ್ದು ವಿಶೇಷವಾಗಿತ್ತು. ಇದೀಗ ಕೆಎಲ್ಆರ್ ಅವರ ಈ ಸ್ಮೈಲಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
— Bangladesh vs Sri Lanka (@Hanji_CricDekho) December 26, 2023
ಮೊದಲ ದಿನದಾಟದಲ್ಲಿ 105 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 10 ಫೋರ್ ಹಾಗೂ 2 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 70 ರನ್ ಬಾರಿಸಿದ್ದಾರೆ. ಕೆಎಲ್ಆರ್ ಅವರ ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿದೆ. ಸದ್ಯ 2ನೇ ದಿನದಾಟಕ್ಕೆ ಕ್ರೀಸ್ನಲ್ಲಿ ಕೆಎಲ್ ರಾಹುಲ್ (70) ಹಾಗೂ ಮೊಹಮ್ಮದ್ ಸಿರಾಜ್ (0) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಡೀನ್ ಎಲ್ಗರ್, ಐಡೆನ್ ಮಾರ್ಕ್ರಾಮ್, ಟೋನಿ ಡಿ ಝೋರ್ಝಿ, ಟೆಂಬಾ ಬವುಮಾ (ನಾಯಕ), ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಝಿ, ಕಗಿಸೊ ರಬಾಡ, ನಾಂಡ್ರೆ ಬರ್ಗರ್.