IND vs SA: ಕೆಜಿ ಮುಂದೆ ಕೆಎಲ್ ಕ್ಲಾಸ್: ಟೀಮ್ ಇಂಡಿಯಾಗೆ ರಾಹುಲ್ ಆಸರೆ
South Africa vs India: ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 68 ರನ್ಗಳ ಜೊತೆಯಾಟವಾಡಿದರು. ಈ ವೇಳೆ ಮತ್ತೆ ದಾಳಿಗಿಳಿದ ರಬಾಡ ಶ್ರೇಯಸ್ ಅಯ್ಯರ್ (31) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (38) ಕೂಡ ರಬಾಡಗೆ ವಿಕೆಟ್ ಒಪ್ಪಿಸಿದರು.
ಸೆಂಚುರಿಯನ್ ಸೂಪರ್ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ (Team India) 8 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ವೇಗಿಗಳು ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. 5ನೇ ಓವರ್ನಲ್ಲೇ ರೋಹಿತ್ ಶರ್ಮಾ (5) ವಿಕೆಟ್ ಪಡೆಯುವ ಮೂಲಕ ಕಗಿಸೊ ರಬಾಡ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ (17) ಹಾಗೂ ಶುಭ್ಮನ್ ಗಿಲ್ (2) ಗೆ ನಾಂಡ್ರೆ ಬರ್ಗರ್ ಪೆವಿಲಿಯನ್ ಹಾದಿ ತೋರಿಸಿದರು.
ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 68 ರನ್ಗಳ ಜೊತೆಯಾಟವಾಡಿದರು. ಈ ವೇಳೆ ಮತ್ತೆ ದಾಳಿಗಿಳಿದ ರಬಾಡ ಶ್ರೇಯಸ್ ಅಯ್ಯರ್ (31) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (38) ಕೂಡ ರಬಾಡಗೆ ವಿಕೆಟ್ ಒಪ್ಪಿಸಿದರು.
ಕೆಜಿ ಮುಂದೆ ಕೆಎಲ್ ಕ್ಲಾಸ್ ಬ್ಯಾಟಿಂಗ್:
ಕೇವಲ 107 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದು ಕೆಎಲ್ ರಾಹುಲ್. 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ಆರ್ ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಸೌತ್ ಆಫ್ರಿಕಾ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ರನ್ ಪೇರಿಸುತ್ತಾ ಸಾಗಿದ ರಾಹುಲ್ ಅರ್ಧಶತಕ ಪೂರೈಸಿದರು. ಆದರೆ ಮತ್ತೊಂದೆಡೆ ರವಿಚಂದ್ರನ್ ಅಶ್ವಿನ್ (8) ಹಾಗೂ ಶಾರ್ದೂಲ್ ಠಾಕೂರ್ (24), ಜಸ್ಪ್ರೀತ್ ಬುಮ್ರಾ (1) ವಿಕೆಟ್ ಒಪ್ಪಿಸಿದರು.
ಶಾರ್ದೂಲ್ ಠಾಕೂರ್ ವಿಕೆಟ್ ಪಡೆಯುವ ಮೂಲಕ ಕಗಿಸೊ ರಬಾಡ (ಕೆಜಿ ರಬಾಡ) ಐದು ವಿಕೆಟ್ಗಳ ಸಾಧನೆ ಮಾಡಿದರು. ಒಂದೆಡೆ ರಬಾಡ ಅದ್ಭುತ ಬೌಲಿಂಗ್ ಸಂಘಟಿಸಿದ್ದರೆ, ಮತ್ತೊಂದೆಡೆ ಕೆಎಲ್ ರಾಹುಲ್ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿದರು.
ಅದರಲ್ಲೂ ಸೌತ್ ಆಫ್ರಿಕಾ ವೇಗದೂತರ ಮುಂದೆ ಏಕಾಂಗಿ ಹೋರಾಟ ಮುಂದುವರೆಸಿದ ಕೆಎಲ್ ರಾಹುಲ್ 105 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 70 ರನ್ ಬಾರಿಸಿದ್ದಾರೆ. ಈ ಮೂಲಕ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 208 ರನ್ ಪೇರಿಸಿದೆ. ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ (70) ಹಾಗೂ ಮೊಹಮ್ಮದ್ ಸಿರಾಜ್ (0) ಇದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಡೀನ್ ಎಲ್ಗರ್, ಐಡೆನ್ ಮಾರ್ಕ್ರಾಮ್, ಟೋನಿ ಡಿ ಝೋರ್ಝಿ, ಟೆಂಬಾ ಬವುಮಾ (ನಾಯಕ), ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಝಿ, ಕಗಿಸೊ ರಬಾಡ, ನಾಂಡ್ರೆ ಬರ್ಗರ್.