The Hundred
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಇಂದಿನಿಂದ (ಜುಲೈ 23) ಶುರುವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು 8 ಪಂದ್ಯಗಳನ್ನಾಡಲಿದೆ. ಈ ಎಂಟು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಹೋಮ್ಗ್ರೌಂಡ್ನಲ್ಲಿ ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್ನಲ್ಲಿ (ಎದುರಾಳಿ ತಂಡದ ಹೋಮ್ಗ್ರೌಂಡ್) ಆಡಲಾಗುತ್ತದೆ. ಇನ್ನು ಟೂರ್ನಿಯು ಟಿ20 ಸ್ವರೂಪವನ್ನು ಹೋಲುತ್ತಿದ್ದರೂ, ನಿಯಮಗಳಲ್ಲಿ ಹಲವು ಬದಲಾವಣೆಗಳಿರುವುದು ವಿಶೇಷ.
ಏನಿದು ಹಂಡ್ರೆಡ್ ಲೀಗ್?
ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.
ದಿ ಹಂಡ್ರೆಡ್ ಲೀಗ್ನ ನಿಯಮಗಳು:
- – ದಿ ಹಂಡ್ರೆಡ್ ಲೀಗ್ನಲ್ಲಿ ಒಂದು ಇನ್ನಿಂಗ್ಸ್ನಲ್ಲಿ 100 ಎಸೆತಗಳನ್ನು ಬೌಲಿಂಗ್ ಮಾಡಲಾಗುತ್ತದೆ. ಅಂದರೆ ಟಿ20 ಕ್ರಿಕೆಟ್ನಲ್ಲಿ 20 ಓವರ್ನಂತೆ 120 ಎಸೆತಗಳಾದರೆ ಇಲ್ಲಿ ತಲಾ 100 ಎಸೆತಗಳಿರಲಿವೆ.
- – ಈ ಲೀಗ್ನಲ್ಲಿ ಬೌಲರ್ ಸತತ 5 ಅಥವಾ 10 ಬೌಲ್ಗಳನ್ನು ಮಾಡಬಹುದು. ಅಂದರೆ ಇಲ್ಲಿ ಓವರ್ ಲೆಕ್ಕಚಾರವು 5 ಎಸೆತಗಳಿಗೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ಸತತ 10 ಎಸೆತಗಳನ್ನು ಎಸೆಯುವ ಅವಕಾಶ ಇರುವುದು ವಿಶೇಷ.
- – ಒಂದು ಇನಿಂಗ್ಸ್ನಲ್ಲಿ ಒಬ್ಬ ಬೌಲರ್ಗೆ 20 ಎಸೆತಗಳು ಮಾತ್ರ ಇರಲಿದೆ.
- – ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬಹುದು.
- – ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಒಂದು ಓವರ್ ಬಳಿಕ ಬ್ಯಾಟ್ಸ್ಮನ್ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಿಕೊಳ್ಳಲಾಗುತ್ತದೆ.
- – ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್‌ಪ್ಲೇ ನೀಡಲಾಗುತ್ತದೆ. ಈ ವೇಳೆ 30 ಯಾರ್ಡ್ ಹೊರಗೆ ಇಬ್ಬರು ಫೀಲ್ಡರ್ಗಳಿಗೆ ಮಾತ್ರ ಅವಕಾಶ ಇರಲಿದೆ.
- – ದಿ ಹಂಡ್ರೆಡ್ ಲೀಗ್ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.
- – 8 ತಂಡಗಳಲ್ಲಿ ಟಾಪ್ 3 ಬರುವ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಅಂದರೆ ಟಾಪ್ 1 ತಂಡದ ಜೊತೆ ಆಡಲು 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಆಡಲಿದೆ.
ದಿ ಹಂಡ್ರೆಡ್ ಲೀಗ್ನಲ್ಲಿ ಕಣಕ್ಕಿಳಿಯುವ ತಂಡಗಳು:
- ಓವಲ್ ಇನ್ವಿನ್ಸಿಬಲ್ಸ್
- ಮ್ಯಾಂಚೆಸ್ಟರ್ ಒರಿಜಿನಲ್ಸ್
- ನಾರ್ಥನ್ ಸೂಪರ್ ಚಾರ್ಜರ್ಸ್
- ಲಂಡನ್ ಸ್ಪಿರಿಟ್
- ಬರ್ಮಿಂಗ್ಹ್ಯಾಮ್ ಫೀನಿಕ್ಸ್
- ಸದರ್ನ್ ಬ್ರೇವ್
- ಟ್ರೆಂಟ್ ರಾಕೆಟ್ಸ್
- ವೆಲ್ಷ್ ಫೈರ್
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಜುಲೈ 23 ರಿಂದ ಆಗಸ್ಟ್ 18 ರವರೆಗೆ ದಿ ಹಂಡ್ರೆಡ್ ಲೀಗ್ ನಡೆಯಲಿದ್ದು, ಹೊಸ ಲೀಗ್ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ತಂಡಗಳ ಸ್ಟಾರ್ ಆಟಗಾರರು ಕಾಣಿಸಿಕೊಳ್ಳುತ್ತಿದ್ದಾರೆ.