IND vs SL: ಭಾರತದ ವಿರುದ್ಧದ ಸರಣಿಗೆ ಶ್ರೀಲಂಕಾ ತಂಡ ಪ್ರಕಟ
India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಶನಿವಾರ ನಡೆದರೆ, 2ನೇ ಪಂದ್ಯವು ಜುಲೈ 28 ರಂದು ಜರುಗಲಿದೆ. ಹಾಗೆಯೇ ಮೂರನೇ ಪಂದ್ಯವು ಜುಲೈ 30 ರಂದು ನಡೆಯಲಿದೆ. ಈ ಸರಣಿಗಾಗಿ ಇದೀಗ ಶ್ರೀಲಂಕಾ ಟಿ20 ತಂಡವನ್ನು ಪ್ರಕಟಿಸಲಾಗಿದೆ.
ಜುಲೈ 27 ರಿಂದ ಶುರುವಾಗಲಿರುವ ಭಾರತದ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಚರಿತ್ ಅಸಲಂಕಾ ಮುನ್ನಡೆಸಲಿದ್ದಾರೆ. ಈ ಹಿಂದೆ ಕ್ಯಾಪ್ಟನ್ ಆಗಿದ್ದ ವನಿಂದು ಹಸರಂಗ ಟಿ20 ವಿಶ್ವಕಪ್ನಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಶ್ರೀಲಂಕಾ ತಂಡದ ನೂತನ ನಾಯಕನಾಗಿ ಚರಿತ್ ಅಸಲಂಕಾ ಆಯ್ಕೆಯಾಗಿದ್ದಾರೆ.
ಚಾಂಪಿಯನ್ ತಂಡದ ನಾಯಕ:
ಚರಿತ್ ಅಸಲಂಕಾ ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಚರಿತ್ ಜಾಫ್ನಾ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಫೈನಲ್ ಪಂದ್ಯದಲ್ಲಿ ಗಾಲೆ ಮಾರ್ವೆಲ್ಸ್ ತಂಡವನ್ನು ಸೋಲಿಸಿ ಜಾಫ್ನಾ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಲಂಕಾ ಪ್ರೀಮಿಯರ್ ಲೀಗ್ನ ಯಶಸ್ವಿ ನಾಯಕನನ್ನೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಟಿ20 ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿರುವುದು ವಿಶೇಷ. ಅಂದರೆ ಟೀಮ್ ಇಂಡಿಯಾ ವಿರುದ್ಧದ ಸರಣಿಯ ಮೂಲಕ ಚರಿತ್ ಅಸಲಂಕಾ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಮ್ಯಾಥ್ಯೂಸ್ ಔಟ್ – ಚಂಡಿಮಲ್ ಇನ್:
ಶ್ರೀಲಂಕಾ ಟಿ20 ತಂಡದಿಂದ ಹಿರಿಯ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಹೊರಬಿದ್ದಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಮ್ಯಾಥ್ಯೂಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರಿಗೆ ಅವಕಾಶ ನೀಡಿಲ್ಲ.
ಹಾಗೆಯೇ 34 ವರ್ಷದ ಅನುಭವಿ ಆಟಗಾರ ದಿನೇಶ್ ಚಂಡಿಮಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಹಿಂದೆ ಚಂಡಿಮಲ್ ಲಂಕಾ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಕಳಪೆ ಫಾರ್ಮ್ನಲ್ಲಿದ್ದ ಕಾರಣ ಅವರಿಗೆ ಚಾನ್ಸ್ ನೀಡಿರಲಿಲ್ಲ. ಇದೀಗ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದಿನೇಶ್ ಚಂಡಿಮಲ್ ಕಂಬ್ಯಾಕ್ ಮಾಡಿದ್ದಾರೆ.
ಶ್ರೀಲಂಕಾ ಟಿ20 ತಂಡ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಜನಿತ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಚಮಿಂದು ವಿಕ್ರಮಸಿಂಗ್, ಮಥೀಶ ಪತಿರಾಣ, ನುವಾನ್ ತುಷಾರ, ದುಷ್ಮಂತ ಚಮೀರ, ಬಿನೂರ ಫರ್ನಾಂಡೋ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ , ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
ಭಾರತ ಮತ್ತು ಶ್ರೀಲಂಕಾ ಸರಣಿ ವೇಳಾಪಟ್ಟಿ:
- ಮೊದಲ ಟಿ20: ಜುಲೈ 27 (ಪಲ್ಲೆಕೆಲೆ) – 7 PM IST
- ಎರಡನೇ ಟಿ20: ಜುಲೈ 28 (ಪಲ್ಲೆಕೆಲೆ) – 7 PM IST
- ಮೂರನೇ ಟಿ20: ಜುಲೈ 30 (ಪಲ್ಲೆಕೆಲೆ) – 7 PM IST