ಪ್ರಸ್ತುತ, ಇಡೀ ಕ್ರಿಕೆಟ್ ಜಗತ್ತಿನಲ್ಲಿ ವಿವಿಧ ಟಿ20 ಲೀಗ್‌ಗಳ ಕುರಿತು ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಐಪಿಎಲ್‌ನ ಮಾಧ್ಯಮ ಹಕ್ಕುಗಳ ಒಪ್ಪಂದವು ಈಗಾಗಲೇ ಗಮನ ಸೆಳೆದಿದ್ದು, ಇದೀಗ ದಕ್ಷಿಣ ಆಫ್ರಿಕಾ ಟಿ20 ಲೀಗ್ ಮತ್ತು ಯುಎಇ ಲೀಗ್‌ಗೆ ಸಂಬಂಧಿಸಿದಂತೆ ಕುತೂಹಲ ಹೆಚ್ಚಾಗತೊಡಗಿದೆ. ಇದೆಲ್ಲದರ ನಡುವೆ ಮತ್ತೊಮ್ಮೆ ಮಹಿಳಾ ಐಪಿಎಲ್ (women’s IPL) ಬಗ್ಗೆ ಟಾಕ್ ಆರಂಭವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಆರಂಭಿಸಲು ದಿನಾಂಕ ನಿಗಧಿಪಡಿಸಲು ಮುಂದಾಗಿದೆ.
ಕ್ರಿಕೆಟ್ ವೆಬ್‌ಸೈಟ್ ಇಎಸ್‌ಪಿಎನ್-ಕ್ರಿಕ್‌ಇನ್‌ಫೋ ವರದಿಯ ಪ್ರಕಾರ ಬಿಸಿಸಿಐ ಮಹಿಳಾ ಐಪಿಎಲ್‌ನ ಮೊದಲ ಸೀಸನ್‌ಗೆ ಮಾರ್ಚ್ 2023 ಸರಿಯಾದ ಸಮಯ ಎಂದು ಗುರುತಿಸಿದೆ. ವರದಿಯ ಪ್ರಕಾರ, 2023 ರ ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್ ಅನ್ನು ಮೊದಲ ಬಾರಿಗೆ ಆಯೋಜಿಸುವುದು ಬಹುತೇಕ ಖಚಿತವಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಜೊತೆಗೆ ಮಂಡಳಿಯು ಕೂಡ ಇದಕ್ಕಾಗಿ ತನ್ನ ಸಿದ್ಧತೆಗಳನ್ನು ಸಹ ಪ್ರಾರಂಭಿಸಿದೆ.
ದೇಶೀಯ ಕ್ಯಾಲೆಂಡರ್‌ನಲ್ಲಿ ಬದಲಾವಣೆ
ಈ ಕಾರಣಕ್ಕಾಗಿಯೇ ಬಿಸಿಸಿಐ ಕೂಡ ಒಂದು ತಿಂಗಳ ಮುಂಚಿತವಾಗಿ ದೇಶೀಯ ಕ್ಯಾಲೆಂಡರ್‌ನಲ್ಲಿ ಮಹಿಳಾ ಪಂದ್ಯಾವಳಿಗಳನ್ನು ಪರಿಚಯಿಸಲು ನಿರ್ಧರಿಸಿದೆ. ಇದರಿಂದಾಗಿ ಮಾರ್ಚ್ ತಿಂಗಳಲ್ಲಿ ಮಹಿಳಾ ಐಪಿಎಲ್ ಆಯೋಜಿಸಲು ಸಮಯವಿದ್ದು, ಈ ಪಂದ್ಯಾವಳಿ ಮುಗಿದ ನಂತರ ಪುರುಷರ ಐಪಿಎಲ್ ಆರಂಭವಾಗಲಿದೆ. ಹೀಗಾಗಿ ಕಳೆದ ವಾರವಷ್ಟೇ ಬಿಸಿಸಿಐ ಹೊಸ ದೇಶೀಯ ಸೀಸನ್ ಬಗ್ಗೆ ಘೋಷಣೆ ಮಾಡಿತ್ತು. ಇದರಲ್ಲಿ ಮಹಿಳಾ ಪಂದ್ಯಾವಳಿಗಳು ಅಕ್ಟೋಬರ್‌ನಿಂದ ಪ್ರಾರಂಭವಾಗಿ, ಫೆಬ್ರವರಿ 2023 ರವರೆಗೆ ನಡೆಯಲಿದೆ.
ಕಾಮನ್ವೆಲ್ತ್ ಗೇಮ್ಸ್ ಬಳಿಕ ಮಹಿಳಾ ಐಪಿಎಲ್ ಬಗ್ಗೆ ಮತ್ತೆ ಟಾಕ್
ಕಳೆದ ವಾರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ 2022 ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಇದಾದ ನಂತರ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಐಪಿಎಲ್‌ನಂತಹ ಟೂರ್ನಿಗಳು ಬೇಕು, ಅಂತಹ ಸಂದರ್ಭಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬಹುದು ಎಂಬ ಚರ್ಚೆ ಮತ್ತೆ ಶುರುವಾಗಿದೆ. ಇದಕ್ಕೂ ಮೊದಲು, ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಮೇಲೆ ನಿರಂತರ ಒತ್ತಡವಿತ್ತು. ಆದರೆ ಆರಂಬದಲ್ಲಿ ಬಿಸಿಸಿಐ ಸಡಿಲ ಧೋರಣೆ ಅನುಸರಿಸಿತು. ಆದರೆ ಕೆಲವು ತಿಂಗಳ ಹಿಂದೆ, ಮಂಡಳಿಯ ಅಧ್ಯಕ್ಷ ಗಂಗೂಲಿ ಮಹಿಳಾ ಐಪಿಎಲ್ 2023 ರಿಂದ ಪ್ರಾರಂಭವಾಗಬಹುದು ಎಂಬ ಹೇಳಿಕೆ ನೀಡಿದ್ದರು.
ಜೊತೆಗೆ ಇದಕ್ಕೆ ಪೂರಕವೆಂಬಂತೆ ಮಹಿಳಾ ಐಪಿಎಲ್‌ನ ಉತ್ಸಾಹ ಹೆಚ್ಚಾಗುತ್ತಿದೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಮೇ ತಿಂಗಳಿನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಹೇಳಿದ್ದರು. ಆರಂಭದಲ್ಲಿ 5 ಅಥವಾ 6 ತಂಡಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಸೂಚಿಸಿದ್ದರು.
Published On - 8:30 pm, Fri, 12 August 22