ಫೈನಲ್ ಗೆದ್ದು ಟ್ರೋಫಿಯೊಂದಿಗೆ ಆಸ್ಪತ್ರೆಗೆ ಬಂದ ಇಡೀ ತಂಡ
ತ್ರಿಶೂರ್ ಟೈಟಾನ್ಸ್ ಕೇರಳ ಕ್ರಿಕೆಟ್ ಲೀಗ್ 2026 ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಕ್ಯಾಲಿಕಟ್ ಗ್ಲೋಬ್ಸ್ಟರ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ. ಪಂದ್ಯದ ವೇಳೆ ಗಾಯಗೊಂಡ ಆಟಗಾರ ಶಾನ್ ರೋಜರ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಜಯದ ನಂತರ, ಇಡೀ ತಂಡ ಟ್ರೋಫಿಯೊಂದಿಗೆ ರೋಜರ್‌ನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಅವರ ಮಡಿಲಲ್ಲಿ ಟ್ರೋಫಿ ಇಟ್ಟು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದು ತಂಡದ ಮನೋಬಲ ಮತ್ತು ಒಗ್ಗಟ್ಟಿಗೆ ಸಾಕ್ಷಿಯಾಗಿದೆ.

ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣ ತಿರುವನಂತಪುರಂನಲ್ಲಿ ನಡೆದ ಕೇರಳ ಕ್ರಿಕೆಟ್ ಲೀಗ್ 2026 ರ ಫೈನಲ್ ಪಂದ್ಯದಲ್ಲಿ ತ್ರಿಶೂರ್ ಟೈಟಾನ್ಸ್ ಹಾಗೂ ಕ್ಯಾಲಿಕಟ್ ಗ್ಲೋಬ್ಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ತ್ರಿಶೂರ್ ಟೈಟಾನ್ಸ್, ಕ್ಯಾಲಿಕಟ್ ಗ್ಲೋಬ್ಸ್ಟರ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಈ ಪಂದ್ಯ ಮುಗಿದ ಬಳಿಕ ಟ್ರೋಫಿ ಹಿಡಿದು ಸಂಭ್ರಮಿಸಿದ ತ್ರಿಶೂರ್ ಟೈಟಾನ್ಸ್ ತಂಡದ ಆಟಗಾರರೆಲ್ಲ ಸಂಭ್ರಮದ ಬಳಿಕ ಸೀದಾ ತಿರುವನಂತಪುರದ ಆಸ್ಪತ್ರೆಗೆ ಬಂದಿದ್ದಾರೆ. ಅಷ್ಟಕ್ಕೂ ಇಡೀ ತಂಡದ ಆಟಗಾರರು ಆಸ್ಪತ್ರೆಗೆ ಬರಲು ಕಾರಣವೆಂದರೆ ಫೈನಲ್ ಪಂದ್ಯದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂಡದ ಆಟಗಾರ ಶಾನ್ ರೋಜರ್.
ಮೈದಾನದಲ್ಲಿ ಅವಘಡ
ವಾಸ್ತವವಾಗಿ, ಫೈನಲ್ ಪಂದ್ಯದ ಸಮಯದಲ್ಲಿ, ಫೀಲ್ಡಿಂಗ್ ಮಾಡುವಾಗ ತ್ರಿಶೂರ್ ಟೈಟಾನ್ಸ್ ತಂಡದ ಆಟಗಾರ ಶಾನ್ ರೋಜರ್ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ತಂಡದ ಸಹ ಆಟಗಾರ ಮೊಹಮ್ಮದ್ ಇನಾನ್ ಜೊತೆಗೆ ಪರಸ್ಪರ ಡಿಕ್ಕಿ ಹೊಡೆದುಕೊಂಡರು. ಈ ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ ಇನಾನ್ ಅವರ ಮೊಣಕಾಲು ನೇರವಾಗಿ ರೋಜರ್ ಅವರ ಎದೆಗೆ ತಗುಲಿತು. ಪರಿಣಾಮವಾಗಿ, ಶಾನ್ ರೋಜರ್ ಸುಮಾರು ಒಂದು ನಿಮಿಷ ಮೈದಾನದಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದರು. ವೈದ್ಯಕೀಯ ತಂಡವು ತಕ್ಷಣ ಮೈದಾನಕ್ಕೆ ಆಗಮಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿತು.
ಹೀಗಾಗಿ ಪ್ರಶಸ್ತಿಯನ್ನು ಗೆದ್ದ ನಂತರ ಇಡೀ ತಂಡದ ಆಟಗಾರರ ಟ್ರೋಫಿಯನ್ನು ತೆಗೆದುಕೊಂಡು ಆಸ್ಪತ್ರೆಗೆ ಆಗಮನಿಸಿದರು. ತಂಡವು ಟ್ರೋಫಿಯೊಂದಿಗೆ ಆಸ್ಪತ್ರೆಗೆ ಬಂದಾಗ, ರೋಜರ್ ಅವರ ಎಡಗೈಗೆ ಬ್ಯಾಂಡೆಜ್ ಹಾಕಲಾಕಿತ್ತು. ಇದನ್ನು ನೋಡಿ ಭಾವುಕರಾದ ಆಟಗಾರರು ಟ್ರೋಫಿಯನ್ನು ಅವರ ಮಡಿಲಲ್ಲಿ ಇಟ್ಟರು. ಈ ವಿಶೇಷ ಕ್ಷಣದ ವೀಡಿಯೊವನ್ನು ಸ್ವತಃ ಶಾನ್ ರೋಜರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಂದ್ಯಾವಳಿಯಲ್ಲಿ ರೋಜರ್ ಪ್ರದರ್ಶನ
ಶಾನ್ ರೋಜರ್ ತ್ರಿಶೂರ್ ಟೈಟಾನ್ಸ್ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಡಿದ 12 ಪಂದ್ಯಗಳಲ್ಲಿ 26.90 ಸರಾಸರಿ ಮತ್ತು 120.63 ಸ್ಟ್ರೈಕ್ ರೇಟ್‌ನಲ್ಲಿ 269 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಅದ್ಭುತ ಅರ್ಧಶತಕವೂ ಸೇರಿತ್ತು. ಲೀಗ್ ಹಂತದಲ್ಲಿ, ತ್ರಿಶೂರ್ 10 ಪಂದ್ಯಗಳಲ್ಲಿ 5 ಗೆಲುವುಗಳು ಮತ್ತು 11 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು. ನಂತರ ಸೆಮಿಫೈನಲ್‌ನಲ್ಲಿ ತ್ರಿಶೂರ್, ತ್ರಿವೇಂದ್ರಮ್ ರಾಯಲ್ಸ್ ತಂಡವನ್ನು 1 ವಿಕೆಟ್‌ನಿಂದ ಸೋಲಿಸಿ ಫೈನಲ್‌ಗೇರಿತ್ತು. ಕಳೆದ ಆವೃತಿಯ ಸೆಮಿಫೈನಲ್‌ನಲ್ಲಿ 10 ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿದ ಟೈಟಾನ್ಸ್, ಈ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.




