ಮೈದಾನದ ಆಚೆಗೆ ಭರ್ಜರಿ ಸಿಕ್ಸ್: ಚೆಂಡು ಕೊಡಲ್ಲವೆಂದು ಎತ್ತಿಕೊಂಡು ಹೋದ ಯುವಕ..!
TNPL 2024: ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತವೆ. ಈ ತಂಡಗಳಲ್ಲಿ ಈ ಬಾರಿ ಲೈಕಾ ಕೋವೈ ಕಿಂಗ್ಸ್, ತಿರುಪ್ಪೂರ್ ತಮಿಳನ್ಸ್, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ದಿಂಡಿಗಲ್ ಡ್ರಾಗನ್ಸ್ ಟೀಮ್ಗಳು ಪ್ಲೇಆಫ್ ಹಂತಕ್ಕೇರಿದೆ. ಅದರಂತೆ ಪ್ಲೇಆಫ್ ಹಂತದ ಪಂದ್ಯಗಳು ಜುಲೈ 30 ರಿಂದ ಶುರುವಾಗಲಿದೆ.
ಗಲ್ಲಿ ಕ್ರಿಕೆಟ್ನಲ್ಲಿ ಚೆಂಡು ಮನೆಯೊಳಗೆ ಹೋದರೆ ಅಥವಾ ಮನೆ ಮೇಲೆ ಬಿದ್ದರೆ ಕೊಡಲ್ಲ ಎಂದೇಳುವುದನ್ನು ನೀವು ನೋಡಿರುತ್ತೀರಿ. ಇಂತಹದ್ದೇ ಒಂದು ತಮಾಷೆಯ ಘಟನೆ ತಮಿಳುನಾಡು ಪ್ರೀಮಿಯರ್ ಲೀಗ್ ವೇಳೆ ಕಂಡು ಬಂದಿದೆ. ಈ ಪಂದ್ಯದಲ್ಲಿ ಮಧುರೈ ಪ್ಯಾಂಥರ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲೀಸ್ ತಂಡಗಳು ಮುಖಾಮುಖಿಯಾಗಿದ್ದವು. ದ್ವಿತೀಯ ಇನಿಂಗ್ಸ್ನ 14ನೇ ಓವರ್ನ 4ನೇ ಎಸೆತದಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ಎಡಗೈ ದಾಂಡಿಗ ಪ್ರದೋಶ್ ಪೌಲ್ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಡೀಪ್ ಮಿಡ್ ವಿಕೆಟ್ನತ್ತ ಸಾಗಿದ ಚೆಂಡು ಹೋಗಿ ಬಿದ್ದದ್ದು ಸ್ಟೇಡಿಯಂ ಪಕ್ಕದ ಗದ್ದೆಯ ಬಳಿ.
ಅತ್ತ ಗದ್ದೆಯ ಬಳಿ ರೆಸ್ಟ್ ತೆಗೆದುಕೊಳ್ಳುತ್ತಿದ್ದ ಯುವಕನಿಗೆ ಚೆಂಡು ಸಿಕ್ಕಿದೆ. ಈ ವೇಳೆ ಸ್ಟೇಡಿಯಂ ಬಳಿಯಿಂದ ಅನೇಕರು ಬಾಲ್ಗಾಗಿ ಮನವಿ ಮಾಡಿದರೂ ಚೆಂಡು ಕೊಡುವುದಿಲ್ಲ ಎಂದು ತಿಳಿಸಿದ್ದಾನೆ. ಈ ಹಾಸ್ಯಮಯ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದ್ದು, ಇದೀಗ ಸ್ಟಾರ್ ಸ್ಪೋರ್ಟ್ಸ್ (ತಮಿಳು) ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧುರೈ ಪ್ಯಾಂಥರ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮಧುರೈ ಪ್ಯಾಂಥರ್ಸ್ ತಂಡವು 9 ರನ್ಗಳ ರೋಚಕ ಜಯ ಸಾಧಿಸಿದೆ.