Robin Uthappa-KL Rahul
ಟೀಮ್ ಇಂಡಿಯಾ (Team India) ಪರ ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 1005 ಪಂದ್ಯಗಳನ್ನು ಆಡಿದೆ. ಈ ವೇಳೆ ಕಣಕ್ಕಿಳಿದ ಆಟಗಾರರ ಸಂಖ್ಯೆ 243. ಅಂದರೆ 1974 ರಿಂದ ಏಕದಿನ ಪಂದ್ಯವಾಡುತ್ತಿರುವ ಟೀಮ್ ಇಂಡಿಯಾವನ್ನು ಇದುವರೆಗೆ 243 ಆಟಗಾರರು ಪ್ರತಿನಿಧಿಸಿದ್ದಾರೆ. ಇವರಲ್ಲಿ ಕೆಲವೇ ಕೆಲವು ಆಟಗಾರರು ಮಾತ್ರ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದರು. ಹೀಗೆ ಬ್ಯಾಟಿಂಗ್ ಮೂಲಕ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಟಾಪ್-3 ಆಟಗಾರರಲ್ಲಿ ಮೂವರು ಕನ್ನಡಿಗರು ಇರುವುದು ವಿಶೇಷ. ಅಂದರೆ ಏಕದಿನ ಕ್ರಿಕೆಟ್ನಲ್ಲಿ ಭಾರತದ ಆಡಿದ ಮೊದಲ ಪಂದ್ಯದಲ್ಲಿ ಮೂವರು ಕ್ರಿಕೆಟಿಗರು ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು. ಈ ಮೂಲಕ ಒನ್ಡೇ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ರನ್ಗಳಿಸಿದ ಬ್ಯಾಟ್ಸ್ಮನ್ಗಳು ಎನಿಸಿಕೊಂಡಿದ್ದಾರೆ. ಹಾಗಿದ್ರೆ ಆ ಟಾಪ್-3 ಆಟಗಾರರು ಯಾರೆಂದು ನೋಡೋಣ….
- 3- ಬ್ರಿಜೇಶ್ ಪಟೇಲ್: ಪ್ರಸ್ತುತ ಕೆಸಿಎ ಅಧ್ಯಕ್ಷರಾಗಿರುವ ಬ್ರಿಜೇಶ್ ಪಟೇಲ್ ಅವರು ಟೀಮ್ ಇಂಡಿಯಾ ಪರ 21 ಟೆಸ್ಟ್ ಮತ್ತು 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1974 ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪಟೇಲ್ ಅವರು ಲೀಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ದ 82 ರನ್ಗಳನ್ನು ಬಾರಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯದಲ್ಲೇ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ಗಳಿಸಿ ಆಟಗಾರ ಎನಿಸಿಕೊಂಡಿದ್ದರು. ವಿಶೇಷ ಎಂದರೆ ಮೂರು ದಶಕಗಳ ಕಾಲ ಇದು ದಾಖಲೆಯಾಗಿತ್ತು.
- 2- ರಾಬಿನ್ ಉತ್ತಪ್ಪ: 2006 ರಲ್ಲಿ ಇಂಗ್ಲೆಂಡ್ ವಿರುದ್ಧದ ನ್ಯಾಟ್ವೆಸ್ಟ್ ಒನ್ಡೇ ಸಿರೀಸ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಕೊಡಗಿನ ಕುವರ ರಾಬಿನ್ ಉತ್ತಪ್ಪ ತಮ್ಮ ಮೊದಲ ಪಂದ್ಯದಲ್ಲೇ 86 ರನ್ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಬ್ರಿಜೇಶ್ ಪಟೇಲ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದರು.
- 1- ಕೆಎಲ್ ರಾಹುಲ್: ಕನ್ನಡಿಗ ರಾಬಿನ್ ಉತ್ತಪ್ಪ ಬರೆದಿಟ್ಟಿದ್ದ ದಾಖಲೆಯನ್ನು ಮುರಿದಿದ್ದು ಮತ್ತೋರ್ವ ಕನ್ನಡಿಗ ಕೆಎಲ್ ರಾಹುಲ್ ಎಂಬುದು ವಿಶೇಷ. 2016 ರಲ್ಲಿ ಜಿಂಬಾಬ್ವೆ ವಿರುದ್ದದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಕೆಎಲ್ಆರ್ ಮೊದಲ ಪಂದ್ಯದಲ್ಲೇ ಶತಕ (ಅಜೇಯ 100) ಸಿಡಿಸಿ ಮಿಂಚಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಹಾಗೂ ಚೊಚ್ಚಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿಕೊಂಡರು.
ಕೆಎಲ್ ರಾಹುಲ್ ಅವರು ಈ ವಿಶೇಷ ದಾಖಲೆ ಬರೆದು 5 ವರ್ಷಗಳೇ ಕಳೆದಿವೆ. ಇದಾಗ್ಯೂ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಯಾವುದೇ ಬ್ಯಾಟ್ಸ್ಮನ್ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.