
ಓಮನ್‌ನಲ್ಲಿ ನಡೆದ 2026ರ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಒಂದು ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ರೂವಾರಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ತಂಡವನ್ನು ಗೆಲುವಿನ ದಡ ಸೇರಿಸಿದ ಮೋಹಿತ್ ಉಲ್ವಾ ಎಂದರೆ ತಪ್ಪಾಗಲಾರದು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 50 ಓವರ್‌ಗಳಲ್ಲಿ 337 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದರೂ, ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 41.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದ್ದಾಗ ಭಾರತದ ಸೋಲು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು.
ಆದರೆ ಏಳನೇ ಕ್ರಮಾಂಕದಲ್ಲಿ ಆಡುತ್ತಿದ್ದ ಮನಾಲ್ ಚೌಹಾಣ್ ಹಾಗೂ 10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮೋಹಿತ್ ಉಲ್ವಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಇಬ್ಬರೂ ಸೇರಿ ತಂಡವನ್ನು ಸೋಲಿನ ಸುಳಿಯಿಂದ ಹೊರತಂದರು. ಮನಾಲ್ ಔಟಾದ ಬಳಿಕವೂ ಎದೆಗುಂದದ ಮೋಹಿತ್ ಕೊನೆಯವರೆಗೂ ಹೋರಾಟ ಮುಂದುವರಿಸಿದರು. ಕೊನೆಯ ಎಸೆತದಲ್ಲಿ ಭಾರತಕ್ಕೆ ಮೂರು ರನ್‌ಗಳ ಅಗತ್ಯವಿದ್ದಾಗ ಬೌಂಡರಿ ಬಾರಿಸಿ ತಂಡಕ್ಕೆ ಏಷ್ಯಾಕಪ್ ಕಿರೀಟ ತಂದುಕೊಟ್ಟರು.
ಟೀಂ ಇಂಡಿಯಾ ಪರ ವೇಗದ ಬೌಲರ್ ಆಗಿರುವ ಮೋಹಿತ್ ಈ ಫೈನಲ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 8 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟರೂ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು. ಕೇವಲ 28 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ತಾವು ಉತ್ತಮ ಆಲ್‌ರೌಂಡರ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದೇವೆ ಎಂಬುದನ್ನು ಸಾಬೀತುಪಡಿಸಿದರು.
18 ವರ್ಷದ ಮೋಹಿತ್ ಉಲ್ವಾ ಗುಜರಾತ್‌ನ ಸುಂದರನಗರದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮಗನಾಗಿದ್ದು, ಜಾಮ್‌ನಗರದಲ್ಲಿ ಕ್ರಿಕೆಟ್‌ನ ಪಾಠ ಕಲಿತರು. ಅವರ ತಂದೆಗೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇತ್ತು. ಆದರೆ ತಮ್ಮ ಕ್ರಿಕೆಟ್ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಗನನ್ನಾದರೂ ಕ್ರಿಕೆಟಿಗನನ್ನಾಗಿ ಮಾಡಬೇಕೆಂಬ ಆಸೆಯಿಂದ ಆತನನ್ನು ಕ್ರಿಕೆಟ್‌ಗೆ ಪರಿಚಯಿಸಿದರು. ಮೋಹಿತ್ ಆರಂಭದಲ್ಲಿ ಮಹೇಂದ್ರ ಸಿಂಗ್ ಚೌಹಾಣ್ ಅವರಿಂದ ಮೋಹಿತ್ ತರಬೇತಿ ಪಡೆದರು.
ಆರಂಭದಲ್ಲಿ ಮೋಹಿತ್‌ಗೆ ಓದುವುದಕ್ಕಿಂತ ಕ್ರಿಕೆಟ್‌ನಲ್ಲೇ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಕ್ರಿಕೆಟ್ ಮೂಲಕವೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸಿದ್ದರು. ಕೋಚ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ ಅಕಾಡೆಮಿಗೆ ಸೇರಿದ ಬಳಿಕ ಅವರ ಆಟದಲ್ಲಿ ಸಾಕಷ್ಟು ಬದಲಾವಣೆಗಳಾದವು. ಆರಂಭದಲ್ಲಿ ಆಫ್ ಸ್ಪಿನ್ನರ್ ಆಗಿದ್ದ ಮೋಹಿತ್, ಕೋಚ್ ಸಲಹೆಯಂತೆ ವೇಗದ ಬೌಲರ್ ಆಗಿ ರೂಪುಗೊಂಡರು.
5 ಇನ್ನಿಂಗ್ಸ್, 361 ರನ್; ಆರ್ಯವೀರ್ ಸೆಹ್ವಾಗ್ ಮುಡಿಗೆ ಬೆಸ್ಟ್ ಪ್ಲೇಯರ್ ಕಿರೀಟ
ಮೋಹಿತ್‌ಗೆ ಆಸ್ಟ್ರೇಲಿಯಾದ ನಾಯಕ ಹಾಗೂ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅಚ್ಚುಮೆಚ್ಚಿನ ಆಟಗಾರ. ಕಮ್ಮಿನ್ಸ್ ಅವರಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗುವ ಆಲ್‌ರೌಂಡರ್ ಆಗಬೇಕೆಂಬ ಆಸೆ ಅವರದ್ದು. ಸೌರಾಷ್ಟ್ರ ಪರ ವಯೋಮಾನದ ಕ್ರಿಕೆಟ್ ಆಡಿದ ಬಳಿಕ ಭಾರತೀಯ ಅಂಡರ್-19 ತಂಡದಲ್ಲೂ ಮೋಹಿತ್ ತಮ್ಮ ಸಾಮರ್ಥ್ಯ ತೋರಿಸಿದರು. ತಂಡದ ಪರ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತಿದ್ದ ಮೋಹಿತ್, ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೂರು ಪಂದ್ಯಗಳ ಯುವ ಏಕದಿನ ಸರಣಿಯಲ್ಲಿ ಐದು ವಿಕೆಟ್ ಕಬಳಿಸಿದ್ದರು. ಏಷ್ಯಾಕಪ್ ಟೂರ್ನಿಯಲ್ಲಿ ಐದು ಪಂದ್ಯಗಳಿಂದ ಕೇವಲ ಮೂರು ವಿಕೆಟ್ ಪಡೆದಿದ್ದರೂ, ಫೈನಲ್‌ನ ನಿರ್ಣಾಯಕ ಸಂದರ್ಭದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದರು.