AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

361 ರನ್ ಸಿಡಿಸಿ ದಾಖಲೆ ನಿರ್ಮಿಸಿದ ಆರ್ಯವೀರ್ ಅಂಡರ್-19 ವಿಶ್ವಕಪ್‌ನಿಂದ ಔಟ್​..!

U19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಯಿತು. ಆರ್ಯವೀರ್ ಸೆಹ್ವಾಗ್ ಟೂರ್ನಿಯ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿ, ದಾಖಲೆಯ 361 ರನ್ ಗಳಿಸಿದರು. ಆದಾಗ್ಯೂ, ವಯಸ್ಸಿನ ಮಿತಿಯಿಂದಾಗಿ ಅವರು ಮುಂದಿನ U19 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಅವರ ಅದ್ಭುತ ಪ್ರದರ್ಶನ ಭವಿಷ್ಯದ ಕ್ರಿಕೆಟ್‌ಗೆ ಭರವಸೆ ಮೂಡಿಸಿದೆ.

361 ರನ್ ಸಿಡಿಸಿ ದಾಖಲೆ ನಿರ್ಮಿಸಿದ ಆರ್ಯವೀರ್ ಅಂಡರ್-19 ವಿಶ್ವಕಪ್‌ನಿಂದ ಔಟ್​..!
Aaryavir Sehwag
ಪೃಥ್ವಿಶಂಕರ
|

Updated on: Nov 14, 2026 | 10:50 PM

Share

ಅಂಡರ್-19 ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಕೊನೆಯ ಎಸೆತದಲ್ಲಿ ಪಾಕಿಸ್ತಾನವನ್ನು ಒಂದು ವಿಕೆಟ್‌ನಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಭಾರತದ ಈ ಪ್ರಶಸ್ತಿ ಗೆಲುವಿನಲ್ಲಿ ಆರ್ಯವೀರ್ ಸೆಹ್ವಾಗ್ ಮಹತ್ವದ ಪಾತ್ರ ವಹಿಸಿದರು. ಪಾಕಿಸ್ತಾನ ನೀಡಿದ್ದ 338 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ 19 ವರ್ಷದ ಆರ್ಯವೀರ್ 58 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲದೆ ನಾಯಕನ ಜೊತೆಗೂಡಿ ಮೊದಲ ವಿಕೆಟ್​ಗೆ 95 ರನ್​ಗಳ ಜೊತೆಯಾಟವನ್ನು ನೀಡಿದರು. ಆರ್ಯವೀರ್ ಸೆಹ್ವಾಗ್ ಫೈನಲ್‌ನಲ್ಲಿ ಮಾತ್ರವಲ್ಲದೆ ಇಡೀ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಇದರ ಫಲವಾಗಿ ಅವರಿಗೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ಆರ್ಯವೀರ್ ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ ಒಟ್ಟು 361 ರನ್ ಗಳಿಸಿದರು. ಈ ಮೂಲಕ ಅಂಡರ್-19 ಏಷ್ಯಾಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೊಸ ದಾಖಲೆ ಬರೆದರು. ಆರ್ಯವೀರ್ ಅವರ ಈ ರನ್‌ಗಳು ಒಂದೆರಡು ಪಂದ್ಯಗಳಿಗೆ ಸೀಮಿತವಾಗಿರಲಿಲ್ಲ. ಟೂರ್ನಿಯ ಐದು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಅರ್ಧಶತಕದ ಗಡಿ ದಾಟಿದ್ದರು. ಇದರಲ್ಲಿ ಒಂದು ಭರ್ಜರಿ 160 ರನ್‌ಗಳ ಶತಕವೂ ಸೇರಿತ್ತು. ಅಷ್ಟೇ ಅಲ್ಲ, ಟೂರ್ನಿಯಲ್ಲಿ ಅತಿ ಹೆಚ್ಚು (16) ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರ ಬ್ಯಾಟಿಂಗ್ ಸರಾಸರಿ 90 ಹಾಗೂ ಸ್ಟ್ರೈಕ್ ರೇಟ್ 95.50 ಆಗಿತ್ತು.

ವಿಶ್ವಕಪ್‌ನಲ್ಲಿ ಆರ್ಯವೀರ್‌ ಆಡುವುದಿಲ್ಲ

ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಆರ್ಯವೀರ್‌ಗೆ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿರುವುದು ಅವರ ಆಟಕ್ಕೆ ತಕ್ಕ ಗೌರವವೇ ಸರಿ. ಆದರೆ ಇಷ್ಟೊಂದು ಅದ್ಭುತ ಪ್ರದರ್ಶನ ನೀಡಿದರೂ, ಆರ್ಯವೀರ್ ಸೆಹ್ವಾಗ್ ಭಾರತ ಪರ ಅಂಡರ್-19 ವಿಶ್ವಕಪ್ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಅವರ ಆಟದ ಸಾಮರ್ಥ್ಯ ಕಾರಣವಲ್ಲ, ಬದಲಾಗಿ ವಯಸ್ಸಿನ ಮಿತಿ ಅಡ್ಡಿಯಾಗಿದೆ. ಸದ್ಯ ಆರ್ಯವೀರ್ ಅವರಿಗೆ 19 ವರ್ಷ 26 ದಿನ ವಯಸ್ಸಾಗಿದೆ. ಈಗಾಗಲೇ 19 ವರ್ಷದ ವಯೋಮಿತಿ ದಾಟಿರುವ ಕಾರಣ ಮುಂದಿನ ಅಂಡರ್-19 ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಅವರಿಗೆ ಇರುವುದಿಲ್ಲ.

‘ಎಂಥಾ ಪಂದ್ಯ, ಎಂಥಾ ಗೆಲುವು!’ ಪಾಕ್ ವಿರುದ್ಧ ಭಾರತದ ಸಾಧನೆಗೆ ಸೆಹ್ವಾಗ್ ಫಿದಾ, ಮಗನಿಗೂ ಮೆಚ್ಚುಗೆ

ಮುಂದಿನ ಅಂಡರ್-19 ವಿಶ್ವಕಪ್ 2028ರ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಅಷ್ಟರ ವೇಳೆಗೆ ಆರ್ಯವೀರ್ ಅವರಿಗೆ ಸುಮಾರು 20 ವರ್ಷ 4 ತಿಂಗಳು ವಯಸ್ಸಾಗಿರುತ್ತದೆ. ಹೀಗಾಗಿ ವಿಶ್ವಕಪ್‌ನಲ್ಲಿ ಆಡಲು ಅವರಿಗೆ ಅವಕಾಶ ಸಿಗುವುದಿಲ್ಲ. ವಿಶ್ವಕಪ್ ಆಡುವ ಅವಕಾಶ ಕೈತಪ್ಪಿದರೂ ಆರ್ಯವೀರ್ ಅಂಡರ್-19 ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಏಷ್ಯಾಕಪ್‌ನಲ್ಲಿ ದಾಖಲೆಯ 361 ರನ್ ಗಳಿಸುವ ಮೂಲಕ ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಿರಿಯರ ಕ್ರಿಕೆಟ್‌ನಲ್ಲೂ ಮಿಂಚುವ ಭರವಸೆ ಮೂಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More