
ಸೆಪ್ಟೆಂಬರ್ 28, 2025 ರಂದು ಯುಎಇಯಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ (Asia Cup 2025) ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಏಷ್ಯಾಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಈಗ 81 ದಿನಗಳ ನಂತರ ಅದೇ ಮೈದಾನದಲ್ಲಿ ಅಂಡರ್-19 ಕ್ರಿಕೆಟ್‌ನಲ್ಲಿ ಮತ್ತೊಂದು ಏಷ್ಯಾಕಪ್ ಟ್ರೋಫಿಯನ್ನು (U19 Asia Cup) ಗೆಲ್ಲುವ ಅವಕಾಶ ಭಾರತ ಯುವ ಪಡೆಗಿದೆ. ಆಯುಷ್ ಮ್ಹಾತ್ರೆ ಅವರ ನಾಯಕತ್ವದಲ್ಲಿ ಭಾರತ ತಂಡ ಅಂಡರ್-19 ಏಷ್ಯಾಕಪ್ ಸೆಮಿಫೈನಲ್ ಪ್ರವೇಶಿಸಿದ್ದು, ಟ್ರೋಫಿ ಎತ್ತಿಹಿಡಿಯಲು ಇನ್ನು 2 ಹೆಜ್ಜೆ ದೂರದಲ್ಲಿದೆ. ಅಚ್ಚರಿಯ ಸಂಗತಿಯೆಂದರೆ ಅಂಡರ್-19 ಏಷ್ಯಾಕಪ್‌ನ ಫೈನಲ್‌ನಲ್ಲಿಯೂ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದ್ದು ಅಭಿಮಾನಗಳಿಗೆ ಮತ್ತೊಂದು ಹೈವೋಲ್ಟೇಜ್ ಕದನವನ್ನು ವೀಕ್ಷಿಸುವ ಅವಕಾಶ ಸಿಗಲಿದೆ.
2015 ರ ಅಂಡರ್-19 ಏಷ್ಯಾಕಪ್ಗೆ ಈಗಾಗಲೇ 4 ತಂಡಗಳು ಸೆಮಿಫೈನಲ್ಗೆ ಎಂಟ್ರಿಕೊಟ್ಟಿವೆ. ಅದರಂತೆ ಭಾರತ ತಂಡವು ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡವು ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಎರಡೂ ಸೆಮಿಫೈನಲ್ ಪಂದ್ಯಗಳು ಡಿಸೆಂಬರ್ 19 ರಂದು ನಡೆಯಲಿವೆ.
ಈಗ, ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಶ್ರೀಲಂಕಾವನ್ನು ಸೋಲಿಸಿದರೆ, ಇತ್ತ ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ ಗೆದ್ದರೆ, ಈ ಭಾನುವಾರ ರೋಮಾಂಚಕಾರಿಯಾಗುವುದು ಖಚಿತ. ಏಕೆಂದರೆ 2025 ರ ಅಂಡರ್-19 ಏಷ್ಯಾಕಪ್‌ನ ಫೈನಲ್ ಪಂದ್ಯವು ಡಿಸೆಂಬರ್ 21 ರ ಭಾನುವಾರದಂದು ನಡೆಯಲಿದೆ. ಅದರಂತೆ ಭಾರತ ಮತ್ತು ಪಾಕಿಸ್ತಾನ ತಮ್ಮ ಸೆಮಿಫೈನಲ್‌ನಲ್ಲಿ ಗೆದ್ದರೆ, ಫೈನಲ್‌ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆಯಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದು ಸಾಧ್ಯವಾದರೆ ಒಂದು ವಾರದೊಳಗೆ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಈ ಹಿಂದೆ ಡಿಸೆಂಬರ್ 14 ರಂದು ಗುಂಪು ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 90 ರನ್‌ಗಳಿಂದ ಸೋಲಿಸಿತ್ತು.
ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 46.1 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಆರನ್ ಜಾರ್ಜ್ 85 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಗಳಿಸಿದರೆ, ಕನಿಷ್ಕ್ ಚೌಹಾಣ್ 46 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಇದಕ್ಕೆ ಉತ್ತರವಾಗಿ, 241 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 150 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕನಿಷ್ಕ್ ಚೌಹಾಣ್ ಮತ್ತು ದೀಪೇಶ್ ದೇವೇಂದ್ರನ್ ತಲಾ ಮೂರು ವಿಕೆಟ್ ಪಡೆದರು. ಕಿಶನ್ ಸಿಂಗ್ ಎರಡು ವಿಕೆಟ್ ಪಡೆದರೆ, ವೈಭವ್ ಸೂರ್ಯವಂಶಿ ಕೂಡ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Thu, 18 December 25