ಕೌಲಾಲಂಪುರ್ನಲ್ಲಿ ನಡೆದ ಅಂಡರ್-19 ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ರಣರೋಚಕ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ಅಂಡರ್-19 ತಂಡದ ನಾಯಕಿ ಸುಮಯ್ಯ ಅಕ್ತೆರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಗೊಂಗಡಿ ತ್ರಿಷಾ ಉತ್ತಮ ಆರಂಭ ಒದಗಿಸಿದ್ದರು.
ಆರಂಭಿಕಗಳಾಗಿ ಕಣಕ್ಕಿಳಿದ ತ್ರಿಷಾ 47 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ನಾಯಕಿ ನಿಕಿ ಪ್ರಸಾದ್ 12 ರನ್ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ಮಿಥಿಲಾ ವಿನೋದ್ 17 ರನ್ಗಳ ಕೊಡುಗೆ ನೀಡಿದರು. ಈ ರನ್ಗಳ ಕೊಡುಗೆಯೊಂದಿಗೆ ಭಾರತ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಿತು.
118 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಫಹೋಮಿದಾ ಚೋಯಾ (18) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಜುವೈರಿಯಾ ಫೆರ್ಡಸ್ 18 ರನ್ಗಳನ್ನು ಬಾರಿಸಿದರು.
ಈ ಮೂಲಕ ಮೊದಲ 10 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 52 ರನ್ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಭಾರತೀಯ ಬೌಲರ್ಗಳು 18.3 ಓವರ್ಗಳಲ್ಲಿ 76 ರನ್ಗಳಿಗೆ ಬಾಂಗ್ಲಾದೇಶ್ ತಂಡವನ್ನು ಆಲೌಟ್ ಮಾಡಿದರು. ಈ ಮೂಲಕ ಟೀಮ್ ಇಂಡಿಯಾ 41 ರನ್ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಭಾರತ ಮಹಿಳಾ U19 ತಂಡ: ನಿಕಿ ಪ್ರಸಾದ್ (ನಾಯಕಿ), ಸನಿಕಾ ಚಲ್ಕೆ, ಜಿ. ತ್ರಿಷಾ, ಕಮಲಿನಿ ಜಿ (ವಿಕೆಟ್ ಕೀಪರ್), ಭಾವಿಕಾ ಅಹಿರೆ, ಈಶಾವರಿ ಅವಸರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂ.ಡಿ.ಶಬನಂ, ನಂಧನ ಎಸ್.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಗಾಯಾಳು
ಬಾಂಗ್ಲಾದೇಶ್ ಮಹಿಳಾ U19 ತಂಡ: ಸುಮಯ್ಯ ಅಕ್ತೆರ್ (ನಾಯಕಿ), ಅಫಿಯಾ ಅಶಿಮಾ ಎರಾ, ಎಂಎಸ್ಟಿ ಇವಾ, ಫಹೋಮಿದಾ ಚೋಯಾ, ಹಬೀಬಾ ಇಸ್ಲಾಂ ಪಿಂಕಿ, ಜುವೈರಿಯಾ ಫೆರ್ದೌಸ್, ಫರಿಯಾ ಆಕ್ಟರ್, ಫರ್ಜಾನಾ ಈಸ್ಮಿನ್, ಅನಿಸಾ ಅಕ್ಟರ್ ಸೋಬಾ, ಸುಮೈಯಾ ಅಕ್ಥರ್ ಸುಬೋರ್ನಾ, ನಿಶಿತಾ ಮಾ ಅಕ್ಟರ್ ನಿಶಿ, ಅರ್ವಿನ್ ತಾನಿ, ಜನ್ನತುಲ್ , ಸಾದಿಯಾ ಅಕ್ಟರ್, ಮಹಾರುನ್ ನೇಸಾ.