ಟೀಮ್ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಗಾಯಾಳು
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ಕಂಡಿದೆ. ಇನ್ನು ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಸಿದ್ಧತೆಯಲ್ಲಿದೆ. ಈ ಸಿದ್ಧತೆಯ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.
Updated on:Dec 22, 2024 | 7:05 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಭಾನುವಾರ ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಹಿಟ್ಮ್ಯಾನ್ ಗಾಯಗೊಂಡಿದ್ದು, ಹೀಗಾಗಿ ಅರ್ಧದಲ್ಲೇ ಪ್ರಾಕ್ಟೀಸ್ ನಿಲ್ಲಿಸಿದ್ದಾರೆ.

ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ರೋಹಿತ್ ಶರ್ಮಾಗೆ ಚೆಂಡೆಸೆಯುತ್ತಿದ್ದರು. ಇದೇ ವೇಳೆ ಚೆಂಡು ಅವರ ಎಡ ಮೊಣಕಾಲಿಗೆ ತಾಗಿದೆ. ಇದರಿಂದ ನೋವಿಗೆ ಒಳಗಾದ ರೋಹಿತ್ ಶರ್ಮಾ ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಫಿಸಿಯೋ ಆರೈಕೆ ಮಾಡಿದ್ದಾರೆ.

ಈ ಆರೈಕೆಯ ಹೊರತಾಗಿಯೂ ನೋವಿನ ಕಾರಣ ರೋಹಿತ್ ಶರ್ಮಾ ಅಭ್ಯಾಸವನ್ನು ಮುಂದುವರೆಸಲಿಲ್ಲ. ಅಲ್ಲದೆ ನಿಲ್ಲಲು ಕೂಡ ತಡಕಾಡಿದರು. ಹೀಗಾಗಿ ಭಾನುವಾರದ 2ನೇ ಅವಧಿಯ ಅಭ್ಯಾಸದಿಂದ ರೋಹಿತ್ ಶರ್ಮಾ ಹೊರಗುಳಿದರು. ಇದೀಗ ಹಿಟ್ಮ್ಯಾನ್ ಗಾಯಗೊಂಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

ಏಕೆಂದರೆ ಬಾಕ್ಸಿಂಗ್ ಡೇ ಟೆಸ್ಟ್ ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಡಿಸೆಂಬರ್ 26 ರಿಂದ 4ನೇ ಟೆಸ್ಟ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿರುವುದು ಆತಂಕವನ್ನುಂಟು ಮಾಡಿದೆ. ಏಕೆಂದರೆ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಮುಂದಿನ ಎರಡೂ ಪಂದ್ಯಗಳು ತುಂಬಾ ಮುಖ್ಯ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ಗಾಯಗೊಂಡಿರುವುದು ಭಾರತ ತಂಡದ ಪಾಲಿಗೆ ಹಿನ್ನಡೆಯನ್ನುಂಟು ಮಾಡಬಹುದು. ಹೀಗಾಗಿ ಮುಂದಿನ ಮೂರು ದಿನಗಳ ಒಳಗೆ ರೋಹಿತ್ ಶರ್ಮಾ ಸಂಪೂರ್ಣವಾಗಿ ಚೇತರಿಸಿಕೊಂಡು ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದೇ ಈಗ ದೊಡ್ಡ ಪ್ರಶ್ನೆ.
Published On - 7:05 am, Sun, 22 December 24



















