ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ನ (U19 World Cup 2024) ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ್ದ ಭಾರತ ಯುವ ಪಡೆ (India U-19 vs New Zealand U-19), ಈ ಪಂದ್ಯವನ್ನು ಬರೋಬ್ಬರಿ 214 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ಭಾರತ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಅದರಲ್ಲೂ ಕೊನೆಯ ಎರಡು ಪಂದ್ಯಗಳಲ್ಲಿ 200 ಕ್ಕೂ ಅಧಿಕ ರನ್‌ಗಳ ಅಂತರದ ಜಯ ಸಾಧಿಸಿತ್ತು. ಇದೀಗ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡವನ್ನು ಉದಯ್ ಸಹಾರನ್ (Uday Saharan) ಪಡೆ ಬರೋಬ್ಬರಿ 214 ರನ್‌ಗಳಿಂದ ಮಣಿಸುವ ಮೂಲಕ ಸತತ ಮೂರು ಪಂದ್ಯಗಳಲ್ಲಿ 200 ಕ್ಕೂ ಅಧಿಕ ರನ್‌ಗಳಿಂದ ಗೆದ್ದ ದಾಖಲೆ ನಿರ್ಮಿಸಿದೆ.
ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆ ಹಾಕಿತು. ತಂಡದ ಪರ ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ಮುಶೀರ್ ಖಾನ್ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರೆ ಆರಂಭಿಕ ಆಟಗಾರ ಆದರ್ಶ್ ಸಿಂಗ್ ಕೂಡ 52 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಸಲುವಾಗಿ ಭಾರತ 50 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 295 ರನ್ ಗಳಿಸಿತು. ಮುಶೀರ್ 126 ಎಸೆತಗಳಲ್ಲಿ 13 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 131 ರನ್ ಗಳಿಸಿದರು. ಆ ಬಳಿಕ ಬೌಲಿಂಗ್ನಲ್ಲೂ ಮಿಂಚಿದ ಮುಶೀರ್, ಕಿವೀಸ್ ಪಾಳಯದ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
U19 World Cup: ಮತ್ತೊಂದು ಸಿಡಿಲಬ್ಬರದ ಶತಕ ಸಿಡಿಸಿದ ಮುಶೀರ್ ಖಾನ್; ಕಿವೀಸ್ಗೆ 296 ರನ್ ಟಾರ್ಗೆಟ್
ಭಾರತ ನೀಡಿದ 296 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಈ ಗುರಿಯ ಸಮೀಪವೂ ಬರಲು ಸಾಧ್ಯವಾಗದೆ ಕೇವಲ 81 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 214 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದು ಸೌಮ್ಯ ಪಾಂಡೆ. ಸೌಮ್ಯ ಪಾಂಡೆ 10 ಓವರ್‌ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರು.
ಭಾರತ ತಂಡ: ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್, ಮುರುಗನ್ ಅಭಿಷೇಕ್, ನಮನ್ ತಿವಾರಿ, ರಾಜ್ ಲಿಂಬಾನಿ, ಸೌಮ್ಯ ಪಾಂಡೆ
ನ್ಯೂಜಿಲೆಂಡ್ ತಂಡ: ಜೇಮ್ಸ್ ನೆಲ್ಸನ್, ಟಾಮ್ ಜೋನ್ಸ್, ಸ್ನೇಹಿತ್ ರೆಡ್ಡಿ, ಲಾಚ್ಲಾನ್ ಸ್ಟಾಕ್‌ಪೋಲ್, ಆಸ್ಕರ್ ಜಾಕ್ಸನ್ (ನಾಯಕ), ಆಲಿವರ್ ತೆವಾಟಿಯಾ, ಝಾಕ್ ಕಮ್ಮಿಂಗ್, ಅಲೆಕ್ಸ್ ಥಾಂಪ್ಸನ್, ಇವಾಲ್ಡ್ ಷ್ರೂಡರ್, ರಯಾನ್ ತ್ಸೋರ್ಗಾಸ್, ಮೇಸನ್ ಕ್ಲಾರ್ಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Tue, 30 January 24