
ಅಂಡರ್-19 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಮುಖಾಮುಖಿಗೆ ದಿನಾಂಕ ನಿಗದಿಯಾಗಿದೆ. ಅದರಂತೆ ಫೆಬ್ರವರಿ 1 ರಂದು ನಡೆಯಲಿರುವ ಸೂಪರ್-6 ಹಂತದ 12ನೇ ಪಂದ್ಯದಲ್ಲಿ ಇಂಡೊ-ಪಾಕ್ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಝಿಂಬಾಬ್ವೆಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನ ಆತಿಥ್ಯವಹಿಸಲಿದೆ.
ಈ ಬಾರಿಯ ಅಂಡರ್-19 ಟೂರ್ನಿಯಲ್ಲಿ ಗ್ರೂಪ್-ಬಿ ನಲ್ಲಿ ಕಣಕ್ಕಿಳಿದಿದ್ದ ಭಾರತ ತಂಡವು ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು 18 ರನ್ಗಳಿಂದ ಮಣಿಸಿದ್ದರು.
ಹಾಗೆಯೇ ಮೂರನೇ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡಕ್ಕೆ 7 ವಿಕೆಟ್ಗಳ ಸೋಲುಣಿಸಿದ್ದರು. ಈ ಮೂಲಕ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ ಟೀಮ್ ಇಂಡಿಯಾ ಸೂಪರ್-6 ಹಂತಕ್ಕೇರಿದ್ದರು.
ಮತ್ತೊಂದೆಡೆ ಗ್ರೂಪ್-ಸಿ ನಲ್ಲಿ ಕಣಕ್ಕಿಳಿದಿದ್ದ ಪಾಕಿಸ್ತಾನ್ ತಂಡವು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 37 ರನ್ಗಳ ಸೋಲನುಭವಿಸಿದ್ದರು. ಈ ಸೋಲಿನ ಹೊರತಾಗಿಯೂ ಪಾಕ್ ಪಡೆ ಸ್ಕಾಟ್ಲೆಂಡ್ ಹಾಗೂ ಝಿಂಬಾಬ್ವೆ ವಿರುದ್ಧ ಜಯಗಳಿಸಿ 4 ಅಂಕಗಳೊಂದಿಗೆ ಸೂಪರ್-6 ಹಂತಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಸೂಪರ್-6 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-2 ನಲ್ಲಿ ಸ್ಥಾನ ಪಡೆದುಕೊಂಡಿದೆ. ಅದರಂತೆ ಉಭಯ ತಂಡಗಳು ಫೆಬ್ರವರಿ 1 ರಂದು ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ಏಷ್ಯಾಕಪ್ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಟೀಮ್ ಇಂಡಿಯಾ.
2025ರ ಅಂಡರ್-19 ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲುಣಿಸುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿತ್ತು. ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ್ ತಂಡವು 50 ಓವರ್ಗಳಲ್ಲಿ 347 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ್ದ ಟೀಮ್ ಇಂಡಿಯಾ ಗಳಿಸಿದ್ದು ಕೇವಲ 156 ರನ್ಗಳು ಮಾತ್ರ. ಈ ಮೂಲಕ 191 ರನ್ಗಳ ಅಂತರದಿಂದ ಸೋತು ಭಾರತ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಈ ಸೋಲು-ಗೆಲುವಿನ ಬಳಿಕ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲು ಮುಂದಾಗಿದೆ.
ಇದನ್ನೂ ಓದಿ: ಬರೋಬ್ಬರಿ 27 ಬಾರಿ… ಹೊಸ ಇತಿಹಾಸ ನಿರ್ಮಿಸಿದ ಜೋ ರೂಟ್
ಅದರಂತೆ ಈ ಬಾರಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಅಂಡರ್-19 ಏಷ್ಯಾಕಪ್ ಫೈನಲ್ ಸೋಲಿನ ಲೆಕ್ಕವನ್ನು ಚುಕ್ತ ಮಾಡಲಿದೆಯಾ ಕಾದು ನೋಡಬೇಕಿದೆ.
Published On - 12:57 pm, Sun, 25 January 26