U19 World Cup 2026: ಭಾರತದ ಕೈಯಲ್ಲಿದೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ

U19 World Cup 2026: ಅಂಡರ್ 19 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಸೆಮಿಫೈನಲ್ ಕನಸು ನುಚ್ಚುನೂರಾಗುವ ಆತಂಕದಲ್ಲಿದೆ. ಫೆಬ್ರವರಿ 1 ರಂದು ಭಾರತದ ವಿರುದ್ಧ ನಡೆಯಲಿರುವ ನಿರ್ಣಾಯಕ ಪಂದ್ಯದ ಫಲಿತಾಂಶದ ಮೇಲೆ ಪಾಕಿಸ್ತಾನದ ಭವಿಷ್ಯ ನಿಂತಿದೆ. ಪಾಕಿಸ್ತಾನ ಗೆದ್ದರೂ, ಭಾರಿ ಅಂತರದ ಜಯ ಅನಿವಾರ್ಯ. ಪಾಯಿಂಟ್ ಟೇಬಲ್ ಮತ್ತು ನೆಟ್ ರನ್ ರೇಟ್ ಪ್ರಕಾರ, ಪಾಕಿಸ್ತಾನದ ಹಾದಿ ಕಷ್ಟಕರವಾಗಿದ್ದು, ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ.

U19 World Cup 2026: ಭಾರತದ ಕೈಯಲ್ಲಿದೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ
Pakistan Team

Updated on: Jan 28, 2026 | 5:27 PM

ಅಂಡರ್ 19 ವಿಶ್ವಕಪ್​ನಲ್ಲಿ (U19 World Cup) ಪ್ರಸ್ತುತ ಸೂಪರ್ 6 ಸುತ್ತು ನಡೆಯುತ್ತಿದೆ. ಟೂರ್ನಿಯ ಭಾಗವಾಗಿರುವ ಪಾಕಿಸ್ತಾನ ಇದೀಗ ಸೆಮಿಫೈನಲ್‌ ಸುತ್ತಿನಿಂದ ಹೊರಬೀಳುವ ಆತಂಕದಲ್ಲಿದೆ. ಆದಾಗ್ಯೂ ಪಾಕಿಸ್ತಾನದ ಸೆಮಿಫೈನಲ್‌ ಭವಿಷ್ಯ ಭಾರತದ ಕೈಯಲ್ಲಿದ್ದು, ಇದು ಫೆಬ್ರವರಿ 1 ರಂದು ತಿಳಿಯಲಿದೆ. ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಫೆಬ್ರವರಿ 1 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲೇಬೇಕಿದೆ, ಒಂದು ವೇಳೆ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಪಾಕಿಸ್ತಾನ ಕೇವಲ ಗೆದ್ದರೆ ಮಾತ್ರ ಸಾಕಾಗದು, ಬದಲಿಗೆ ಭಾರಿ ಅಂತರದ ಗೆಲುವು ಬೇಕು. ಆದರೆ ಟೀಂ ಇಂಡಿಯಾದ ವಿರುದ್ಧ ಪಾಕಿಸ್ತಾನ ಆ ರೀತಿಯ ಪ್ರದರ್ಶನ ನೀಡುವುದು ಅಸಾಧ್ಯವಾಗಿದ್ದು, ಪಾಕಿಸ್ತಾನದ ಸೆಮಿಫೈನಲ್‌ ಹಾದಿ ಭಾಗಶಃ ಮುಚ್ಚಿದೆ ಎನ್ನಬಹುದು.

ಪಾಯಿಂಟ್ ಟೇಬಲ್ ಪರಿಸ್ಥಿತಿ ಹೀಗಿದೆ

ಗುಂಪು 2 ರಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೇರಿವೆ. ಈ ಎರಡೂ ತಂಡಗಳಿಗೂ ಸೆಮಿಫೈನಲ್​ಗೇರುವ ಅವಕಾಶ ಪಾಕಿಸ್ತಾನಕ್ಕಿಂತ ಹೆಚ್ಚಿದೆ. ಗುಂಪು 2 ರ ಪಾಯಿಂಟ್‌ ಪಟ್ಟಿಯಲ್ಲಿ ಮೂರು ತಂಡಗಳ ಸ್ಥಿತಿಯನ್ನು ನೋಡುವುದಾದರೆ, ಟೀಂ ಇಂಡಿಯಾ 2ನೇ ತಂಡವಾಗಿ ಸೂಪರ್ ಸಿಕ್ಸ್‌ ಸ್ಥಾನಕ್ಕೇರಿತ್ತು. ಇತ್ತ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿತ್ತು. ಆದಾಗ್ಯೂ ಭಾರತ ತನ್ನ ಮೊದಲ ಸೂಪರ್ ಸಿಕ್ಸ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 200 ಕ್ಕೂ ಹೆಚ್ಚು ರನ್‌ಗಳ ಬೃಹತ್ ಗೆಲುವಿನೊಂದಿಗೆ, ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದೆ. ಮಾತ್ರವಲ್ಲದೆ ಇಂಗ್ಲೆಂಡ್ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಅದರ ನೆಟ್ ರನ್ ರೇಟ್​ ಕೂಡ ಅದ್ಭುತವಾಗಿದೆ.

ಸೂಪರ್ ಸಿಕ್ಸ್ ಸುತ್ತಿನಲ್ಲಿ ಮೊದಲ ಮೂರು ಪಂದ್ಯಗಳನ್ನು ಆಡಿದ ನಂತರ ಭಾರತ ತಂಡ 6 ಅಂಕಗಳು ಮತ್ತು 3.337 ರ ನೆಟ್ ರನ್ ರೇಟ್​ನೊಂದಿಗೆ ನಂ. 1 ಸ್ಥಾನದಲ್ಲಿದೆ. ಭಾರತದಂತೆಯೇ, ಇಂಗ್ಲೆಂಡ್ ಕೂಡ ಮೂರು ಪಂದ್ಯಗಳಲ್ಲಿ 6 ಅಂಕಗಳನ್ನು ಹೊಂದಿದೆಯಾದರೂ ಅದರ ನೆಟ್ ರನ್ ರೇಟ್ 1.989 ಆಗಿದ್ದು, ಭಾರತಕ್ಕಿಂತ ಗಮನಾರ್ಹವಾಗಿ ಕಡಿಮೆ ಇದೆ. ಇತ್ತ ಪಾಕಿಸ್ತಾನ ಆಡಿರುವ ಮೂರು ಪಂದ್ಯಗಳಿಂದ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ 4 ಅಂಕಗಳನ್ನು ಹೊಂದಿದೆ. ಅದರ ನೆಟ್ ರನ್ ರೇಟ್ (1.484) ಭಾರತ ಮತ್ತು ಇಂಗ್ಲೆಂಡ್ ಎರಡಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ತಮ್ಮ ತಮ್ಮ ಮುಂದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಸುಲಭವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ. ಆದರೆ ಪಾಕಿಸ್ತಾನದ ಹಾದಿ ಕಷ್ಟಕರವಾಗಿದ್ದು, ಅದರ ಭವಿಷ್ಯ ಭಾರತದ ಕೈಯಲ್ಲಿದೆ.

ಪಾಕಿಸ್ತಾನದ ಲೆಕ್ಕಾಚಾರ ಹೇಗಿದೆ?

ಪಾಕಿಸ್ತಾನ ಸೆಮಿಫೈನಲ್​ಗೇರಬೇಕೆಂದರೆ ಇಂಗ್ಲೆಂಡ್ ತನ್ನ ಮುಂದಿನ ಮತ್ತು ಕೊನೆಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಬೇಕು. ಆ ಬಳಿಕ ಫೆಬ್ರವರಿ 1 ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲೇಬೇಕು. ಒಂದು ವೇಳೆ ಪಾಕಿಸ್ತಾನ ಭಾರತದ ವಿರುದ್ಧ ಸೋತರೆ ಸೆಮಿಫೈನಲ್ ಹಾದಿ ಮುಚ್ಚಲಿದೆ. ಪಾಕಿಸ್ತಾನ. ಭಾರತದ ವಿರುದ್ಧ ಗೆದ್ದರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ಅದು ಭಾರಿ ಅಂತರದ ಜಯವಾಗಿರವೇಕು.

ಉದಾಹರಣೆಗೆ, ಭಾರತ ಮೊದಲು ಬ್ಯಾಟಿಂಗ್ ಮಾಡಿ 250 ರನ್ ಗಳಿಸಿದರೆ, ಪಾಕಿಸ್ತಾನ 25 ಅಥವಾ ಅದಕ್ಕಿಂತ ಕಡಿಮೆ ಓವರ್‌ಗಳು ಬಾಕಿ ಇರುವಾಗಲೇ ಆ ಗುರಿಯನ್ನು ಬೆನ್ನಟ್ಟಬೇಕು. ಭಾರತ 300 ರನ್‌ಗಳ ಗುರಿಯನ್ನು ನಿಗದಿಪಡಿಸಿದರೆ, ಪಾಕಿಸ್ತಾನ ಕನಿಷ್ಠ 22 ಓವರ್‌ಗಳು ಬಾಕಿ ಇರುವಾಗಲೇ ಪಂದ್ಯವನ್ನು ಮುಗಿಸಬೇಕು. ಭಾರತ 350 ರನ್‌ಗಳನ್ನು ಗಳಿಸಿದರೆ, ಪಾಕಿಸ್ತಾನ ಕನಿಷ್ಠ 19 ಓವರ್‌ಗಳು ಬಾಕಿ ಇರುವಾಗ ಆ ಗುರಿಯನ್ನು ಬೆನ್ನಟ್ಟಬೇಕು.

ಅದೇ ರೀತಿ, ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 250 ರನ್ ಗಳಿಸಿದರೆ, ಅದು 118 ರನ್ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಪಂದ್ಯವನ್ನು ಗೆಲ್ಲಬೇಕು. ಪಾಕಿಸ್ತಾನ 300 ರನ್ ಗಳಿಸಿದರೆ, ಭಾರತದ ವಿರುದ್ಧ ಅದರ ಗೆಲುವಿನ ಅಂತರ ಕನಿಷ್ಠ 96 ರನ್ ಆಗಿರಬೇಕು. ಪಾಕಿಸ್ತಾನ 350 ರನ್ ಗಳಿಸಿದರೆ, ಅದು 72 ರನ್ ಅಥವಾ ಅದಕ್ಕಿಂತ ಹೆಚ್ಚಿನ ಗೆಲುವಿನ ಅಂತರ ಹೊಂದಬೇಕು. ಒಟ್ಟಾರೆಯಾಗಿ, ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಪಾಕಿಸ್ತಾನ ತಂಡವು 2026 ರ ಅಂಡರ್-19 ಏಕದಿನ ವಿಶ್ವಕಪ್‌ನಿಂದ ಹೊರಗುಳಿದಂತೆ ಕಾಣುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Wed, 28 January 26