ಪಂದ್ಯದ ವೇಳೆ ಕೋತಿಯ ಕಿತಾಪತಿ! ಬೆಚ್ಚಿಬಿದ್ದ ಕರ್ನಾಟಕದ ಆಟಗಾರ್ತಿ; ವಿಡಿಯೋ ವೈರಲ್
ನಾಗ್ಪುರದಲ್ಲಿ ನಡೆದ U19 ಮಹಿಳಾ T20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಯುವ ಆಟಗಾರ್ತಿ ಉಮಾ ಕಾಶ್ವಿ ಮೇಲೆ ಕೋತಿಯೊಂದು ದಾಳಿ ಮಾಡಲು ಪ್ರಯತ್ನಿಸಿದ್ದು, ಭಯಾನಕ ಸನ್ನಿವೇಶ ಸೃಷ್ಟಿಸಿತು. ಈ ಘಟನೆಯ ವೈರಲ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಆಘಾತದ ನಡುವೆಯೂ ಕಾಶ್ವಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಗೆಲುವು ತಂದುಕೊಟ್ಟರು. ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ನಾಗ್ಪುರದಲ್ಲಿ ನಡೆದ 19 ವರ್ಷದೊಳಗಿನವರ ಮಹಿಳಾ ಟಿ20 ಟ್ರೋಫಿಯಲ್ಲಿ ಕರ್ನಾಟಕ ಮತ್ತು ವಿದರ್ಭ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಪಂದ್ಯ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದ ಕೋತಿಯೊಂದು ಕರ್ನಾಟಕದ ಯುವ ಆಟಗಾರ್ತಿ ಉಮಾ ಕಾಶ್ವಿ ಅವರನ್ನು ಬೆಚ್ಚಿಬೀಳಿಸಿದಲ್ಲದೆ ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ. ಆದರೆ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರ ಕಿರುಚಾಟಕ್ಕೆ ಬೆದರಿದ ಕೋತಿ ಅಲ್ಲಿಂದ ಓಡಿ ಹೋಗಿದೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 22ರಂದು ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ಉಮಾ ಕಾಶ್ವಿ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಕೋತಿಯೊಂದು ಏಕಾಏಕಿ ಅವರ ಕಡೆಗೆ ಓಡಿಬಂದಿದೆ. ಇದರಿಂದ ಗಾಬರಿಗೊಂಡ 15 ವರ್ಷದ ಕಾಶ್ವಿ, ಕೋತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಇದರಿಂದ ವಿಚಲಿತಗೊಂಡ ಕೋತಿ ಅಲ್ಲಿಂದ ಓಡಿಹೋಗಿದೆ.
View this post on Instagram
ಆಟದಲ್ಲಿ ಮಿಂಚಿದ ಕಾಶ್ವಿ
ಮೈದಾನದಲ್ಲಿ ಇಂತಹ ಅಚ್ಚರಿಯ ಘಟನೆ ನಡೆದರೂ ಉಮಾ ಕಾಶ್ವಿ ತಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ ಮಿಂಚಿದ ಅವರು, ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ವಿದರ್ಭ ವಿರುದ್ಧ ಕರ್ನಾಟಕ ತಂಡ ಆರು ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಕಾಶ್ವಿ ಅವರ ಬೌಲಿಂಗ್ ಪ್ರಮುಖ ಪಾತ್ರ ವಹಿಸಿತು.
ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತು. ಖುಷಿ ಸೂರ್ಯಕಾಂತ್ ಅಜೇಯ 33 ರನ್ ಗಳಿಸಿದರೆ, ಕಾರ್ಣಿಕಾ ಕಾರ್ತಿಕ್ 23 ರನ್‌ಗಳ ಕೊಡುಗೆ ನೀಡಿದರು. ಇತ್ತ 141 ರನ್‌ಗಳ ಗುರಿ ಬೆನ್ನಟ್ಟಿದ ವಿದರ್ಭ ತಂಡ, ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 134 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕರ್ನಾಟಕ ತಂಡ ಆರು ರನ್‌ಗಳ ರೋಚಕ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತು.
ಕರ್ನಾಟಕ ತಂಡ ಅಕ್ಟೋಬರ್ 24ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ದೆಹಲಿ ಮತ್ತು ಹರಿಯಾಣ ತಂಡಗಳು ಮುಖಾಮುಖಿಯಾಗಲಿವೆ. ಈ ಟೂರ್ನಿಯ ಎಲ್ಲ ಪಂದ್ಯಗಳು ನಾಗ್ಪುರದ ಲೇಡಿ ಅಮೃತ್‌ಬಾಯಿ ದಾಗಾ ಕಾಲೇಜು ಮೈದಾನದಲ್ಲಿ ನಡೆಯುತ್ತಿವೆ.




