ರೋಹಿತ್ ವಿಕೆಟ್ ಪಡೆದು ಸಂಭ್ರಮಾಚರಣೆ ಮಾಡದಿರಲು ಕಾರಣ ತಿಳಿಸಿದ ಉಮರ್ ನಜೀರ್

|

Updated on: Jan 23, 2025 | 8:09 PM

Rohit Sharma's Ranji Trophy Return: ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನ ರಣಜಿ ಟ್ರೋಫಿಯಲ್ಲೂ ಮುಂದುವರೆದಿದೆ. 10 ವರ್ಷಗಳ ಬಳಿಕ ರಣಜಿ ಅಖಾಡಕ್ಕಿಳಿದಿದ್ದ ರೋಹಿತ್ ಕೇವಲ 3 ರನ್ ಗಳಿಸಿ ಔಟ್ ಆದರು. ಜಮ್ಮು ಮತ್ತು ಕಾಶ್ಮೀರದ ಉಮರ್ ನಜೀರ್ ಅವರು ರೋಹಿತ್ ಅವರ ವಿಕೆಟ್ ಪಡೆದರೂ ಸಂಭ್ರಮಿಸಲಿಲ್ಲ. ಇದೀಗ ತಾನು ಸಂಭ್ರಮಿಸದಿರಲು ಕಾರಣ ಏನು ಎಂಬುದನ್ನು ಈ ವೇಗಿ ವಿವರಿಸಿದ್ದಾರೆ.

ರೋಹಿತ್ ವಿಕೆಟ್ ಪಡೆದು ಸಂಭ್ರಮಾಚರಣೆ ಮಾಡದಿರಲು ಕಾರಣ ತಿಳಿಸಿದ ಉಮರ್ ನಜೀರ್
ಉಮರ್ ನಜೀರ್, ರೋಹಿತ್ ಶರ್ಮಾ
Follow us on

ಸುದೀರ್ಘ ಕಾಯುವಿಕೆಯ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಿಮವಾಗಿ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಬಹಳ ದಿನಗಳಿಂದ ತಮ್ಮ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ರೋಹಿತ್, ತಮ್ಮ ತವರು ತಂಡ ಮುಂಬೈ ಪರವಾಗಿ ಮೈದಾನಕ್ಕಿಳಿದರಾದರೂ ಅವರ ವಾಪಸಾತಿ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿದ್ದಂತೆಯೇ ಇತ್ತು. 10 ವರ್ಷಗಳ ಬಳಿಕ ರಣಜಿ ಅಂಗಳಕ್ಕಿಳಿದ ರೋಹಿತ್ ಕೇವಲ 3 ರನ್ ಗಳಿಸಿ ಔಟಾದರು. ಒಂದೆಡೆ ರೋಹಿತ್ ವೈಫಲ್ಯದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ರೋಹಿತ್ ವಿಕೆಟ್ ಉರುಳಿಸಿದ ಜಮ್ಮು ಮತ್ತು ಕಾಶ್ಮೀರ ವೇಗಿ ಉಮರ್ ನಜೀರ್ ಕೂಡ ಅಷ್ಟೇ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಅವರು ರೋಹಿತ್ ವಿಕೆಟ್ ಪಡೆದರೂ ಸಂಭ್ರಮಿಸದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ ಇದೀಗ ಈ ಬೌಲರ್ ತಾನು ಏಕೆ ಸಂಭ್ರಮಾಚರಣೆ ಮಾಡಲಿಲ್ಲ ಎಂಬುದಕ್ಕೆ ಕಾರಣವನ್ನೂ ನೀಡಿದ್ದಾರೆ.

ಅದೇ ಕಳಪೆ ಆಟ

ರಣಜಿ ಟ್ರೋಫಿಯ ಗುಂಪು ಹಂತದ ಪಂದ್ಯದಲ್ಲಿ ಇಂದು ಮುಂಬೈ ತಂಡ, ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸುತ್ತಿದೆ. ಪಂದ್ಯದ ಮೊದಲ ದಿನದಂದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಂದ ತುಂಬಿದ್ದರೂ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು. ಅದರಲ್ಲೂ ಟೆಸ್ಟ್ ಕೆರಿಯರ್ ಅಪಾಯದಲ್ಲಿರುವ ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಟೀಂ ಇಂಡಿಯಾ ನಾಯಕನಿಗೆ ರಣಜಿ ಟ್ರೋಫಿಯ ಮೊದಲ ಇನ್ನಿಂಗ್ಸ್‌ನಲ್ಲೂ ಅದ್ಭುತ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

ಸುಮಾರು 10 ವರ್ಷಗಳ ನಂತರ ಈ ಟೂರ್ನಿಗೆ ಮರಳಿದ ರೋಹಿತ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಓಪನಿಂಗ್ ಮಾಡಿದರು. ಆದರೆ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವ ಈ ಜೋಡಿ ಮುಂಬೈನಲ್ಲೂ ವಿಫಲವಾಯಿತು. ಜೈಸ್ವಾಲ್ ಔಟಾದ ಕೆಲವೇ ಹೊತ್ತಿನಲ್ಲಿ ರೋಹಿತ್ ಕೂಡ ನಿರ್ಗಮಿಸಿದರು. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಲೆಜೆಂಡರಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರ ಎಸೆತದಲ್ಲಿ ಔಟಾದ ರೀತಿಯಲ್ಲಿಯೇ ರೋಹಿತ್ ಔಟಾದರು. ವ್ಯತ್ಯಾಸವೆಂದರೆ ಈ ಬಾರಿಯ ಬೌಲರ್ ಕಮ್ಮಿನ್ಸ್‌ನಂತೆ ಅನುಭವಿ ಮತ್ತು ವಿಶ್ವ ಕ್ರಿಕೆಟ್ ದಂತಕಥೆಯಾಗಿರಲಿಲ್ಲ, ಬದಲಿಗೆ ಆತ ಜಮ್ಮು ಮತ್ತು ಕಾಶ್ಮೀರದ ಹಿರಿಯ ವೇಗಿ ಒಮರ್ ನಜೀರ್.

ಸಂಭ್ರಮಿಸಲಿಲ್ಲ ಏಕೆ?

ಸುಮಾರು 6 ಅಡಿ 4 ಇಂಚು ಎತ್ತರದ ಈ ಬೌಲರ್ ಆರಂಭದಿಂದಲೂ ರೋಹಿತ್‌ಗೆ ಸಾಕಷ್ಟು ತೊಂದರೆ ನೀಡಿ ನಂತರ ಅವರನ್ನು ಔಟ್ ಮಾಡಿದರು. ಆದರೆ ರೋಹಿತ್‌ನಂತಹ ದಿಗ್ಗಜ ಬ್ಯಾಟ್ಸ್‌ಮನ್‌ನ ವಿಕೆಟ್ ಪಡೆದ ನಂತರವೂ ಉಮರ್ ಅಥವಾ ಅವರ ಸಹ ಆಟಗಾರರು ಯಾವುದೇ ರೀತಿಯಲ್ಲಿ ಸಂಭ್ರಮಿಸದಿರುವುದು ಎಲ್ಲರಿಗೂ ಆಶ್ಚರ್ಯ ತಂದಿತು. ದಿನದಾಟದ ಅಂತ್ಯದ ನಂತರ ಈ ಬಗ್ಗೆ ಮಾತನಾಡಿದ ಉಮರ್, ‘ನಾನು ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿಯಾದ ಕಾರಣ ಅವರ ವಿಕೆಟ್ ಪಡೆದ ನಂತರ ಸಂಭ್ರಮಾಚರಣೆ ಮಾಡಲಿಲ್ಲ. ಅವರ ವಿಕೆಟ್ ಪಡೆಯುವುದು ನನಗೆ ತುಂಬಾ ವಿಶೇಷವಾಗಿದೆ. ನಾನು ಮೊದಲ ಬಾರಿಗೆ ಅವರಿಗೆ ಬೌಲಿಂಗ್ ಮಾಡಿದೆ ಎಂದಿದ್ದಾರೆ.

ಮುಂಬೈ ಬ್ಯಾಟಿಂಗ್‌ ವೈಫಲ್ಯ

ರೋಹಿತ್ ಅವರ ವೈಫಲ್ಯವು ಅವರ ರೆಡ್ ಬಾಲ್ ವೃತ್ತಿಜೀವನದ ಮೇಲೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ, ರೋಹಿತ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಪುನರಾಗಮನದ ಅವಕಾಶವಿದೆ. ಮೊದಲ ದಿನದಾಟದ ಮಟ್ಟಿಗೆ ಹೇಳುವುದಾದರೆ, ರೋಹಿತ್ ಮಾತ್ರವಲ್ಲದೆ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆಯಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಕೂಡ ರನ್ ಗಳಿಸಲು ವಿಫಲರಾದರು. ಅನುಭವಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕಷ್ಟಕಾಲದಲ್ಲಿ 51 ರನ್‌ಗಳ ಇನ್ನಿಂಗ್ಸ್‌ ಆಡದೇ ಇದ್ದಿದ್ದರೆ ಮುಂಬೈ ತಂಡ 120 ರನ್‌ಗಳನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಮುಂಬೈನ ಅಗ್ರ-6 ಬ್ಯಾಟ್ಸ್‌ಮನ್‌ಗಳ ಪೈಕಿ ಉಮರ್ ನಜೀರ್ ಒಬ್ಬರೇ 4 ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಜಮ್ಮು ಮತ್ತು ಕಾಶ್ಮೀರ 7 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ