ಬರೋಬ್ಬರಿ 9 ವರ್ಷಗಳ ಟೀಮ್ ಇಂಡಿಯಾ ಅಂಡರ್ 19 ತಂಡ ವಿಶ್ವಕಪ್ ಗೆದ್ದು ವಿಶ್ವ ಚಾಂಪಿಯನ್ ಎನಿಸಿಕೊಂಡಿತು. ಈ ಯುವ ಪಡೆಯನ್ನು ಮುನ್ನಡೆಸಿದ್ದು ಉನ್ಮುಕ್ತ್ ಚಂದ್. ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಯುವ ಬಲಗೈ ಬ್ಯಾಟ್ಸ್ಮನ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅದರಲ್ಲೂ ಟೀಮ್ ಇಂಡಿಯಾದ ಮುಂದಿನ ಆರಂಭಿಕ ಆಟಗಾರ ಎಂದು ಕೂಡ ಬಣ್ಣಿಸಲಾಗಿತ್ತು. ಅತ್ತ ಐಪಿಎಲ್ನಲ್ಲೂ ಅವಕಾಶ ಪಡೆದರು. ಆದರೆ ಆಮೇಲೆನಾಯ್ತು ಗೊತ್ತಿಲ್ಲ. ಸತತ ವೈಫಲ್ಯ, ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡರು. ಒಂದೆರೆಡು ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಉನ್ಮುಕ್ತ್ ಚಂದ್ ಹೆಸರು ಕ್ರಿಕೆಟ್ ಅಂಗಳದಿಂದ ನಿಧಾನವಾಗಿ ಮರೆಯಾಯಿತು. ಆ ಬಳಿಕ ಮತ್ತೆ ಸುದ್ದಿಯಾಗಿದ್ದು 2 ದಿನಗಳ ಹಿಂದೆಯಷ್ಟೇ. ಹೌದು, ದಿನಗಳ ಹಿಂದೆಯಷ್ಟೇ 28 ವರ್ಷದ ಚಂದ್ ಭಾರತೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಅಲ್ಲದೆ ಇತರೆ ಅವಕಾಶವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದರು.
ಅದರಂತೆ ಉನ್ಮುಕ್ತ್ ಚಂದ್ ಭವಿಷ್ಯದಲ್ಲಿ ಅಮೆರಿಕ ತಂಡದ ಪರ ಆಡಲಿದ್ದಾರೆ ಎನ್ನಲಾಗಿತ್ತು. ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ಉನ್ಮುಕ್ತ್ ಮೈನರ್ ಕ್ರಿಕೆಟ್ ಲೀಗ್ ಆಫ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಲೀಗ್‌ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ. ಆದರೆ ಚೊಚ್ಚಲ ಪಂದ್ಯದಲ್ಲೇ ಅವರ ಪ್ರದರ್ಶನ ಮತ್ತೆ ಉನ್ಮುಕ್ತ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೌದು, ಅಮೆರಿಕ ಲೀಗ್ ಮೂಲಕ ಹೊಸ ಇನಿಂಗ್ಸ್ ಆರಂಭಿಸಿದ ಉನ್ಮುಕ್ತ್ ಎದುರಿಸಿದ್ದು ಕೇವಲ 3 ಎಸೆತಗಳು ಮಾತ್ರ. ಅದರಲ್ಲಿ ಕ್ಲೀನ್ ಬೌಲ್ಡ್ ಆಗಿ ಶೂನ್ಯಕ್ಕೆ ಔಟಾಗಿದ್ದಾರೆ. ಚೆಂಡಿನ ವೇಗವನ್ನು ಗುರುತಿಸಲು ಎಡವಿದ ಉನ್ಮುಕ್ತ್ ಶೂನ್ಯದೊಂದಿಗೆ ಹೊಸ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ಬ್ರೇಟ್ ಲೀ ಅವರ ಮೊದಲ ಎಸೆತದಲ್ಲೇ ಡೆಲ್ಲಿ ಡೇರ್ ಡೇವಿಲ್ಸ್ ಪರ ಆಡಿದ್ದ ಉನ್ಮುಕ್ತ್ ಚಂದ್ ಕ್ಲೀನ್ ಬೌಲ್ಡ್ ಆಗಿದ್ದರು. ಮೊದಲ ಎಸೆತದಲ್ಲಿನ ಬೌಲ್ಡ್ ಅವರ ಐಪಿಎಲ್ ಕ್ರಿಕೆಟ್ ಕೆರಿಯರ್ಗೆ ಮುಳುವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಚಂದ್ ಮತ್ತದೇ ತಪ್ಪನ್ನು ಮಾಡಿದ್ದಾರೆ.
I don’t think Unmukt Chand will be sharing this on his Instagram Stories anytime soon. Third-ball duck on @MiLCricket debut for the ex-India 2012 U19 World Cup winning captain. He was opening the batting for Silicon Valley Strikers in Morgan Hill, California today. pic.twitter.com/El0G1fLmP1
— Peter Della Penna (@PeterDellaPenna) August 15, 2021
ಹಲವು ತಂಡಗಳ ಪರ ಆಡಿದ ಆಟಗಾರ:
ಉನ್ಮುಕ್ತ್ ಚಂದ್ 2019-20ರ ದೇಶೀಯ ಕ್ರಿಕೆಟ್ನಲ್ಲಿ ಉತ್ತರಾಖಂಡ್ ಪರ ಆಡಿದ್ದರು. ಅಲ್ಲೂ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗಿರಲಿಲ್ಲ. 6 ಪ್ರಥಮ ದರ್ಜೆ ಪಂದ್ಯಗಳಿಂದ ಕೇವಲ 144 ರನ್ ಮಾತ್ರ ಕಲೆಹಾಕಿದ್ದರು. ಇದರ ನಂತರ, ಅವರು 2020-21ರ ಸೀಸನ್ನಲ್ಲಿ ದೆಹಲಿ ಪರ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ನಿರ್ಧರಿಸಿದರು. ಆದಾಗ್ಯೂ, ಸೈಯದ್ ಮುಷ್ತಾಕ್ ಅಲಿ ಟಿ 20 ಪಂದ್ಯಾವಳಿಗೆ ದೆಹಲಿ ತಂಡದ ಆಯ್ಕೆಗಾರರು ಅವರನ್ನು ನಿರ್ಲಕ್ಷಿಸಿದ್ದರು. ವಿಜಯ್ ಹಜಾರೆ ಟೂರ್ನಿಯಲ್ಲಿ ತಂಡದಲ್ಲಿ ಸ್ಥಾನ ನೀಡಲಾಯಿತು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.
18ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ:
ಉನ್ಮುಕ್ತ್ ಚಂದ್ ಕೇವಲ 18 ವರ್ಷದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದೇ ವೇಳೆ ಚಂದ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಲಾಗುತ್ತಿತ್ತು. ಆದರೆ ಅಂಡರ್ 19 ಟೀಮ್ ಇಂಡಿಯಾದಲ್ಲಿ ಮಿಂಚಿದ್ದ ಆಟಗಾರನ ಅದೃಷ್ಟ ಆ ಬಳಿಕ ಕೈಕೊಟ್ಟಿತು. ನಿವೃತ್ತಿಯ ಬಳಿಕ ಬಗ್ಗೆ ಮಾತನಾಡಿದ ಉನ್ಮುಕ್ತ್ ಚಂದ್, ಐಪಿಎಲ್ ಆಡಿದ್ದು, ನನಗೆ ದೊಡ್ಡ ಅನುಭವ. ಆದರೆ ನಾನು ಅದೃಷ್ಟಶಾಲಿಯಾಗಿರಲಿಲ್ಲ ಎಂದು ತಿಳಿಸಿದ್ದರು. ಒಟ್ಟಿನಲ್ಲಿ ಹೊಸ ಕೆರಿಯರ್ ನಿರೀಕ್ಷೆಯೊಂದಿಗೆ ಅಮೆರಿಕ ಮೈನರ್ ಲೀಗ್ಗೆ ಎಂಟ್ರಿ ಕೊಟ್ಟಿರುವ ಉನ್ಮುಕ್ತ್ ಚಂದ್ ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?