ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026ರ (T20 World Cup 2026) ಟೂರ್ನಿಗೆ ಯುಎಸ್ಎ (ಅಮೆರಿಕ) ತಂಡ ನೇರ ಅರ್ಹತೆ ಪಡೆದುಕೊಂಡಿದೆ. ಟಿ20 ವಿಶ್ವಕಪ್ 2024 ರಲ್ಲಿ ಸೂಪರ್-8 ಹಂತಕ್ಕೇರುವ ಮೂಲಕ ಯುಎಸ್ಎ ತಂಡ ಈ ಅರ್ಹತೆ ಗಿಟ್ಟಿಸಿಕೊಂಡಿದೆ. ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಯುಎಸ್ಎ ತಂಡವು ಆತಿಥೇಯ ರಾಷ್ಟ್ರವಾಗಿ ಕಣಕ್ಕಿಳಿದಿತ್ತು. ಇದೀಗ ಚೊಚ್ಚಲ ಟೂರ್ನಿಯಲ್ಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ 2026 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಇಲ್ಲಿ ಆತಿಥೇಯ ರಾಷ್ಟ್ರಗಳಾದ ಭಾರತ ಮತ್ತು ಶ್ರೀಲಂಕಾ ತಂಡಗಳಿಗೆ ನೇರ ಅರ್ಹತೆ ಇರಲಿದೆ.
ಹಾಗೆಯೇ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೇರುವ 8 ತಂಡಗಳೂ ಕೂಡ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಅದರಂತೆ ಇದೀಗ ದ್ವಿತೀಯ ಸುತ್ತಿಗೆ ಪ್ರವೇಶಿಸಿರುವ ಯುಎಸ್ಎ ತಂಡವು ಮುಂದಿನ ಟಿ20 ವಿಶ್ವಕಪ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
20 ತಂಡಗಳಲ್ಲಿ 12 ತಂಡಗಳು ಡೈರೆಕ್ಟ್ ಎಂಟ್ರಿ ಪಡೆಯಲಿದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೇರಿದ 8 ತಂಡಗಳು ನೇರ ಅರ್ಹತೆ ಪಡೆಯಲಿದೆ. ಹಾಗೆಯೇ ಇನ್ನುಳಿದ ನಾಲ್ಕು ತಂಡಗಳನ್ನು ಟಿ20 ತಂಡಗಳ ಶ್ರೇಯಾಂಕವನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.
ಅದರಂತೆ ಈ ಬಾರಿ ಟಿ20 ವಿಶ್ವಕಪ್ನ ಮೊದಲ ಸುತ್ತಿನಿಂದಲೇ ಹೊರಬಿದ್ದಿರುವ ನ್ಯೂಝಿಲೆಂಡ್, ಪಾಕಿಸ್ತಾನ್ ತಂಡಗಳು ಟಿ20 ತಂಡಗಳ ಶ್ರೇಯಾಂಕದ ಆಧಾರದ ಮೇಲೆ ನೇರ ಅರ್ಹತೆ ಪಡೆಯಲಿದೆ. ಇನ್ನುಳಿದ 8 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಈ ಮೂಲಕ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ.
ಇದನ್ನೂ ಓದಿ: IND vs CAN: ಭಾರತ vs ಕೆನಡಾ ಪಂದ್ಯ ನಡೆಯುವುದು ಡೌಟ್