
2026 ರ ಟಿ20 ವಿಶ್ವಕಪ್‌ಗೆ (T20 World Cup) ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯಾವಳಿಯಲ್ಲಿ ಇಪ್ಪತ್ತು ತಂಡಗಳು ಆಡಲಿದ್ದು, ಈಗಾಗಲೇ ಭಾಗಶಃ ತಂಡಗಳನ್ನು ಘೋಷಿಸಲಾಗಿದೆ. ಇದೀಗ ಯುಎಸ್ಎ (USA) ಕೂಡ ತನ್ನ 15 ಸದಸ್ಯರ ತಂಡವನ್ನು ಬಹಿರಂಗಪಡಿಸಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ಭಾರತೀಯ ಮತ್ತು ಪಾಕಿಸ್ತಾನಿ ಮೂಲದ ಆಟಗಾರರು ಸೇರಿದ್ದು, ಒಟ್ಟಿಗೆ ಆಡಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಅಮೆರಿಕ ತಂಡ, ಟೀಂ ಇಂಡಿಯಾ ವಿರುದ್ಧವೂ ಸ್ಪರ್ಧಿಸಲಿದೆ.
2026 ರ ಟಿ20 ವಿಶ್ವಕಪ್‌ಗಾಗಿ ಅಮೆರಿಕ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಾವಳಿಯಲ್ಲಿ ಯುಎಸ್ಎ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. 2024 ರ ಟಿ20 ವಿಶ್ವಕಪ್‌ನಲ್ಲಿ, ತಂಡವು ತನ್ನ ಚೊಚ್ಚಲ ಆವೃತ್ತಿಯಲ್ಲೇ ಸೂಪರ್ 8 ಹಂತವನ್ನು ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನ ನೀಡುವ ಇರಾದೆಯಲ್ಲಿ ಅಮೆರಿಕ ತಂಡವಿದೆ. ಈ ಬಾರಿಯ ಯುಎಸ್ಎ ಟಿ20 ವಿಶ್ವಕಪ್ ತಂಡದಲ್ಲಿ ಹಿಂದಿನ ಆವೃತ್ತಿಯಲ್ಲಿ ತಂಡದ ಭಾಗವಾಗಿದ್ದ 10 ಆಟಗಾರರು ಸೇರಿದ್ದಾರೆ. ಕೆಲವು ಹೊಸ ಮುಖಗಳು ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದು, ಮೋನಾಂಕ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಅಮೆರಿಕ ತಂಡವು ಹೆಚ್ಚಾಗಿ ಭಾರತೀಯ ಮೂಲದ ಆಟಗಾರರನ್ನು ಒಳಗೊಂಡಿದ್ದು, ಪಾಕಿಸ್ತಾನ ಮೂಲದ ಇಬ್ಬರು ಆಟಗಾರರನ್ನು ಸಹ ಆಯ್ಕೆ ಮಾಡಲಾಗಿದೆ. ಅಲಿ ಖಾನ್ ಮತ್ತು ಮೊಹಮ್ಮದ್ ಮೊಹ್ಸಿನ್ ಪಾಕಿಸ್ತಾನದಲ್ಲಿ ಜನಿಸಿದ ಇಬ್ಬರು ಆಟಗಾರರಾಗಿದ್ದರೂ, ಅವರು ಅಮೆರಿಕ ತಂಡಕ್ಕಾಗಿ ಆಡಲಿದ್ದಾರೆ. ಅಲಿ ಖಾನ್ ದೀರ್ಘಕಾಲದವರೆಗೆ ತಂಡದ ಭಾಗವಾಗಿದ್ದಾರೆ, ಆದರೆ ಮೊಹಮ್ಮದ್ ಮೊಹ್ಸಿನ್ ಅವರನ್ನು ಮೊದಲ ಬಾರಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶ್ರೀಲಂಕಾ ಮೂಲದ ಶೆಹನ್ ಜಯಸೂರ್ಯ ಅವರನ್ನು ಸಹ ಆಯ್ಕೆ ಮಾಡಲಾಗಿದೆ.
10 players from 2024 edition return to feature for USA at the ICC Men’s #T20WorldCup 2026 in India & Sri Lanka 👌https://t.co/vomZBi8JZ2
— ICC (@ICC) January 30, 2026
2026 ರ ಟಿ20 ವಿಶ್ವಕಪ್‌ಗಾಗಿ ಯುಎಸ್‌ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಜೆಸಿ ಸಿಂಗ್, ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೀಜ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತೂಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್, ಮೊಹಮ್ಮದ್ ಮೊಹ್ಸಿನ್, ಶುಭಂ ರಂಜನೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ