
ವಡೋದರಾದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಆತಿಥೇಯ ಟೀಂ ಇಂಡಿಯಾ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಸುಮಾರು 15 ವರ್ಷಗಳ ನಂತರ ವಡೋದರಾದಲ್ಲಿ ಏಕದಿನ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಮತ್ತೊಮ್ಮೆ ವಿರಾಟ್ ಕೊಹ್ಲಿ (Virat Kohli) ಅವರ ಅದ್ಭುತ ಬ್ಯಾಟಿಂಗ್‌ನಿಂದ 301 ರನ್‌ಗಳ ಗುರಿಯನ್ನು ಇನ್ನೊಂದು ಓವರ್ ಬಾಕಿ ಇರುವಂತೆಯೇ ಬೆನ್ನಟ್ಟಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆದಾಗ್ಯೂ ಕೊಹ್ಲಿ ಕೇವಲ 7 ರನ್ಗಳಿಂದ ಶತಕ ವಂಚಿತರಾದರೂ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ಆರಂಭಿಕ ಜೋಡಿ ಹೆನ್ರಿ ನಿಕೋಲ್ಸ್ ಮತ್ತು ಡೆವೊನ್ ಕಾನ್ವೇ 21 ಓವರ್‌ಗಳಲ್ಲಿ 117 ರನ್‌ಗಳ ಜೊತೆಯಾಟ ಹಂಚಿಕೊಂಡರು. ಇದರ ಜೊತೆಗೆ ಇಬ್ಬರೂ ಅರ್ಧಶತಕವನ್ನು ಪೂರೈಸಿದರು. ಹರ್ಷಿತ್ ರಾಣಾ ಈ ಪಾಲುದಾರಿಕೆಯನ್ನು ಮುರಿಯುವಲ್ಲಿ ಯಶಸ್ವಿಯಾದರು. ಈ ಇಬ್ಬರ ವಿಕೆಟ್ ಪತನದ ಬಳಿಕ ಒಂದು ತುದಿಯಲ್ಲಿ ಸ್ಥಿರವಾಗಿ ನಿಂತ ಡ್ಯಾರಿಲ್ ಮಿಚೆಲ್ ಕೂಡ ಭಾರತದ ವಿರುದ್ಧ ಮತ್ತೊಂದು ಅರ್ಧಶತಕ ಪೂರೈಸಿದರು.
ಆದಾಗ್ಯೂ ಶತಕದಂಚಿನಲ್ಲಿ ಎಡವಿದ ಮಿಚೆಲ್ 84 ರನ್ ಗಳಿಸಿ ಔಟಾದರು. ಕೊನೆಯ ಓವರ್‌ನಲ್ಲಿ, ಟೈಲೆಂಡರ್‌ಗಳು 14 ರನ್ ಗಳಿಸಿ ತಂಡದ ಮೊತ್ತವನ್ನು 300 ರನ್ಗಳಿಗೆ ಕೊಂಡೊಯ್ದರು. ಭಾರತ ಪರ ಸಿರಾಜ್, ಹರ್ಷಿತ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಆದಾಗ್ಯೂ, ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ ಸಿರಾಜ್ ಎಂಟು ಓವರ್‌ಗಳಲ್ಲಿ ಕೇವಲ 40 ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು.
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮಾಜಿ ನಾಯಕ ರೋಹಿತ್ ಶರ್ಮಾ ಎರಡು ಸಿಕ್ಸರ್ ಮತ್ತು ಬೌಂಡರಿ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಇತ್ತ ನಾಯಕ ಶುಭ್ಮನ್ ಗಿಲ್ ರನ್ ಗಳಿಸಲು ಹೆಣಗಾಡುತ್ತಿದ್ದ ಸಮಯದಲ್ಲಿ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ತಕ್ಷಣವೇ ಬೌಂಡರಿಗಳನ್ನು ಹೊಡೆಯಲು ಪ್ರಾರಂಭಿಸಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 28,000 ರನ್ಗಳನ್ನು ಪೂರ್ಣಗೊಳಿಸಿದರು. ಮಾತ್ರವಲ್ಲದೆ ಗಿಲ್ ಜೊತೆಗೆ 118 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ನಾಯಕ ಶುಭ್ಮನ್ ಗಿಲ್ ಅರ್ಧಶತಕ ಬಾರಿಸಿ ಔಟಾಗುವ ಮೂಲಕ ಈ ಜೊತೆಯಾಟ ಅಂತ್ಯವಾಯಿತು.
IND vs NZ: 28 ಸಾವಿರ ರನ್‌ಗಳ ಸರದಾರ ನಮ್ಮ ಕಿಂಗ್ ಕೊಹ್ಲಿ; ಸಂಗಕ್ಕಾರ ದಾಖಲೆ ಧ್ವಂಸ
ಗಿಲ್ ವಿಕೆಟ್ ಬಳಿಕವೂ ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಕೊಹ್ಲಿ ಅರ್ಧಶತಕವನ್ನು ಪೂರೈಸಿದರು. ಕೊಹ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ಕೊಹ್ಲಿಯ ಶತಕ ಮತ್ತು ಟೀಮ್ ಇಂಡಿಯಾದ ಗೆಲುವು ಖಚಿತವೆಂದು ತೋರುತ್ತಿದ್ದ ಸಮಯದಲ್ಲೇ ತಂಡದ ವಿಕೆಟ್ ಪತನ ಶುರುವಾಯಿತು. ಇದಕ್ಕೆ ನಾಂದಿ ಹಾಡಿದ ವಿರಾಟ್ ಕೊಹ್ಲಿ 93 ರನ್‌ಗಳಿಸಿ ಜೇಮಿಸನ್‌ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನಲ್ಲಿ ಜಡೇಜಾ ಔಟಾದರೆ, ಅರ್ಧಶತಕದಂಚಿನಲ್ಲಿದ್ದ ಶ್ರೇಯಸ್ ಕೂಡ ಜೇಮಿಸನ್‌ಗೆ ಬಲಿಯಾದರು. ಸತತ ವಿಕೆಟ್‌ಗಳ ಪತನದಿಂದ ಟೀಂ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿದಂತೆ ಕಂಡುಬಂದಿತು. ಆದಾಗ್ಯೂ, ಕೆಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ 37 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ನಂತರ ರಾಹುಲ್ ಅಂತಿಮವಾಗಿ ಸಿಕ್ಸ್ ಬಾರಿಸಿ 49 ಓವರ್‌ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 pm, Sun, 11 January 26