- Kannada News Photo gallery Cricket photos IND vs NZ: Virat Kohli Surpasses Sangakkara, Becomes 2nd Highest Scorer
IND vs NZ: 28 ಸಾವಿರ ರನ್‌ಗಳ ಸರದಾರ ನಮ್ಮ ಕಿಂಗ್ ಕೊಹ್ಲಿ; ಸಂಗಕ್ಕಾರ ದಾಖಲೆ ಧ್ವಂಸ
Virat Kohli Breaks Sangakkara Record: ಭಾರತ vs ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ದಾಖಲೆ ನಿರ್ಮಿಸಿದ್ದಾರೆ. 28000 ಅಂತರಾಷ್ಟ್ರೀಯ ರನ್‌ಗಳ ಗಡಿ ದಾಟಿ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. 557 ಪಂದ್ಯಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದು, ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರಾಗಿದ್ದಾರೆ. ಇದು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಸುವರ್ಣ ಮೈಲಿಗಲ್ಲು.
Updated on: Jan 11, 2026 | 7:25 PM

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ, ಆತಿಥೇಯ ಭಾರತಕ್ಕೆ 301 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಭಾರತ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ.

ಆದಾಗ್ಯೂ ಈ ಪಂದ್ಯದಲ್ಲಿ ಭಾರತಕ್ಕೆ ಸಾಧಾರಣ ಆರಂಭ ಸಿಕ್ಕಿತು. ನಾಯಕ ಶುಭ್ಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್ಗೆ 39 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದು ಬಿತ್ತು. ಆ ನಂತರ ಬಂದ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕ ಹಾಗೂ 1 ಅರ್ಧಶತಕದೊಂದಿಗೆ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕುವುದರೊಂದಿಗೆ ಅನೇಕ ದಾಖಲೆಗಳನ್ನು ನಿರ್ಮಿಸಿದ್ದ ಕೊಹ್ಲಿ, ಈ ಪಂದ್ಯದಲ್ಲಿ 25 ರನ್ ಕಲೆಹಾಕಿದ ಕೂಡಲೇ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 28000 ರನ್‌ಗಳ ಗಡಿ ದಾಟಿದರು.

ತಮ್ಮ 557 ನೇ ಪಂದ್ಯ ಮತ್ತು 624 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ ಕೊಹ್ಲಿ, ಈ ಸಾಧನೆ ಮಾಡಿದ ಮೂರನೇ ಕ್ರಿಕೆಟ್ ಎನಿಸಿಕೊಂಡರು. ಆ ಬಳಿಕ ತಮ್ಮ ಖಾತೆಗೆ ಮತ್ತೆ 17 ರನ್ಗಳನ್ನು ಸೇರಿಸಿದ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.

ವಿರಾಟ್ ಕೊಹ್ಲಿಗೂ ಮೊದಲು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಲೆಜೆಂಡರಿ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ 28016 ರನ್ ಕಲೆಹಾಕಿದ್ದರು. ಇದೀಗ 28016 ರನ್‌ಗಳ ಗಡಿ ದಾಟಿರುವ ಕೊಹ್ಲಿ, ಲಂಕಾ ದಿಗ್ಗಜನ ದಾಖಲೆ ಮುರಿದು ಎರಡನೇ ಸ್ಥಾನಕ್ಕೇರಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಲೆಜೆಂಡರಿ ಆಟಗಾರ ಸಚಿನ್ ತೆಂಡೂಲ್ಕರ್, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬರೋಬ್ಬರಿ 34357 ರನ್ ಕಲೆಹಾಕಿದ್ದಾರೆ. ಪ್ರಸ್ತುತ ಕೊಹ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಸಚಿನ್ ದಾಖಲೆ ಮುರಿಯುವುದು ಅಸಾಧ್ಯವಾಗಿದೆ. ಏಕೆಂದರೆ ಕೊಹ್ಲಿ ಈಗಾಗಲೇ ಟಿ20 ಹಾಗೂ ಟೆಸ್ಟ್ಗೆ ವಿದಾಯ ಹೇಳಿರುವುದರಿಂದ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ.
