- Kannada News Photo gallery Cricket photos IND vs NZ ODI: Washington Sundar Injured, Another Blow to Team India
IND vs NZ: ಪಂದ್ಯದ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದ ಟೀಂ ಇಂಡಿಯಾ ಆಲ್‌ರೌಂಡರ್
Washington Sundar Injury: ಭಾರತ-ನ್ಯೂಜಿಲೆಂಡ್ ODI ಸರಣಿಯಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ರಿಷಭ್ ಪಂತ್ ನಂತರ ಈಗ ವಾಷಿಂಗ್ಟನ್ ಸುಂದರ್ ಮೊದಲ ಪಂದ್ಯದಲ್ಲೇ ಬೆನ್ನು ನೋವಿನಿಂದ ಮೈದಾನ ತೊರೆದಿದ್ದಾರೆ. ಆಫ್-ಸ್ಪಿನ್ ಹಾಗೂ ಕೆಳಕ್ರಮಾಂಕದ ಬ್ಯಾಟಿಂಗ್ ಮೂಲಕ ತಂಡಕ್ಕೆ ಸಮತೋಲನ ನೀಡುವ ಸುಂದರ್ ಗಾಯಗೊಂಡಿರುವುದು ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಅವರ ಸ್ಥಿತಿಗತಿ ವೈದ್ಯಕೀಯ ವೀಕ್ಷಣೆಯಲ್ಲಿದೆ, ಇದು ಸರಣಿಯ ಮೇಲೆ ಪರಿಣಾಮ ಬೀರಬಹುದು.
Updated on: Jan 11, 2026 | 6:04 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಸರಣಿಯ ಆರಂಭಕ್ಕೂ ಮುನ್ನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಇಂಜುರಿಗೊಂಡು ತಂಡದಿಂದ ಹೊರಬಿದ್ದ ಆಘಾತದಲಿದ್ದ ಟೀಂ ಇಂಡಿಯಾಗೆ ಇದೀಗ ಇನ್ನೊಂದು ಆಘಾತ ಎದುರಾಗಿದೆ.

ಮೊದಲ ಏಕದಿನ ಪಂದ್ಯಕ್ಕೆ ಸ್ಪಿನ್ ಆಲ್‌ರೌಂಡರ್ ಆಗಿ ತಂಡವನ್ನು ಕೂಡಿಕೊಂಡಿದ್ದ ವಾಷಿಂಗ್ಟನ್ ಸುಂದರ್ ಗಾಯಗೊಂಡು ಅರ್ಧ ಪಂದ್ಯದಲ್ಲೇ ಮೈದಾನ ತೊರೆದಿದ್ದಾರೆ. ಸುಂದರ್ ಬೌಲಿಂಗ್ ಮಾಡುವಾಗ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಅವರು ಅರ್ಧಕ್ಕೆ ಆಟವನ್ನು ನಿಲ್ಲಿಸಿ ಮೈದಾನದಿಂದ ಹೊರಹೋಗಬೇಕಾಯಿತು.

ತಮ್ಮ ಖೋಟಾದ ಐದನೇ ಓವರ್ ಬೌಲ್ ಮಾಡುವಾಗ ಸುಂದರ್ ನೋವಿನಿಂದ ನರಳಲಾರಂಭಿಸಿದರು. ಕೂಡಲೇ ತಂಡದ ಫಿಸಿಯೋ ಸುಂದರ್ ನೆರವಿಗೆ ಬಂದರು. ಆದಾಗ್ಯೂ ನೋವು ಹೆಚ್ಚಾದ ಕಾರಣದಿಂದಾಗಿ ಸುಂದರ್ ಸ್ವಲ್ಪ ಸಮಯದ ನಂತರ ಮೈದಾನವನ್ನು ತೊರೆದರು. ಹೀಗಾಗಿ ಅವರ ಬದಲಿಗೆ ಬೇರೆ ಆಟಗಾರ ಫಿಲ್ಡಿಂಗ್ ಮಾಡಬೇಕಾಯಿತು.

ವರದಿಗಳ ಪ್ರಕಾರ, ವಾಷಿಂಗ್ಟನ್ ಸುಂದರ್ ಪ್ರಸ್ತುತ ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ. ವೈದ್ಯರು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸುಂದರ್ ತಂಡದ ಪ್ರಮುಖ ಸ್ಪಿನ್ ಆಲ್‌ರೌಂಡರ್ ಆಗಿರುವುದರಿಂದ ಈ ಗಾಯವು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು.ಏಕೆಂದರೆ ಸುಂದರ್ ಆಫ್-ಸ್ಪಿನ್ ಮಾತ್ರವಲ್ಲದೆ ಕೆಳ ಕ್ರಮಾಂಕದ ಬ್ಯಾಟಿಂಗ್ ಮೂಲಕ ತಂಡಕ್ಕೆ ಸಮತೋಲನವನ್ನು ಒದಗಿಸುತ್ತಾರೆ.

ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ ಐದು ಓವರ್‌ಗಳನ್ನು ಬೌಲಿಂಗ್ ಮಾಡಿ 27 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಮೈದಾನದಿಂದ ಹೊರನಡೆದಿರುವ ಸುಂದರ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಮರಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
